ತುಮಕೂರಲ್ಲಿ ಜಾತ್ರೆ ಮೆರವಣಿಗೆ ವೇಳೆ ಎರಡು ಕೋಮುಗಳ ನಡುವೆ ಘರ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಜು.11- ಜಾತ್ರೆ ನಿಮ್ಮಿತ್ತ ಮೆರವಣಿಗೆ ಮೂಲಕ ಸಾಗಿ ಮಾರ್ಗಮಧ್ಯೆ ಕುಣಿದು ಕುಪ್ಪಳಿಸುತ್ತಿದ್ದಾಗ ಒಂದು ಕೋಮಿನ ಗುಂಪೊಂದು ಏಕಾಏಕಿ ಡ್ಯಾನ್ಸ್ ಮಾಡುತ್ತಿದ್ದ ಯುವಕರ ಮೇಲೆ ಹಲ್ಲೆ ನಡೆಸಿದ ಪರಿಣಾಮ ಎರಡು ಕೋಮುಗಳ ನಡುವೆ ಘರ್ಷಣೆ ನಡೆದು ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು.

ನಗರದ ಮರಳೂರು ದಿಣ್ಣೆಯಲ್ಲಿರುವ ಜಾಡಾಳ ಅಮ್ಮನ ಜಾತ್ರೆ ಕಳೆದ ನಾಲ್ಕು ದಿನಗಳಿಂದ ಆರಂಭವಾಗಿದ್ದು, ನಿನ್ನೆ ರಾತ್ರಿ ಮೆರವಣಿಗೆ ಮೂಲಕ ಜಾತ್ರೆ ಅಂತ್ಯವಾಗುತ್ತಿತ್ತು. ಈ ನಿಮಿತ್ತ ದೇವರ ಮೆರವಣಿಗೆಯಲ್ಲಿ ಯುವಕರ ಗುಂಪು ಸಾಗುತ್ತಾ ಮರಳೂರು ಗ್ರಾಮದ ಮುಖ್ಯರಸ್ತೆಯ 8ನೇ ಕ್ರಾಸ್‍ನಲ್ಲಿರುವ ಮಸೀದಿಯೊಂದರ ಮುಂದೆ ಹೋಗುತ್ತಿದ್ದಾಗ ಡಿಜೆಯನ್ನು ನಿಲ್ಲಿಸಿ ಡ್ಯಾನ್ಸ್ ಮಾಡುತ್ತಿದ್ದ ಯುವಕರ ಮೇಲೆ ಒಂದು ಕೋಮಿನ ಯುವಕರು ಹಲ್ಲೆ ನಡೆಸಿದ ಪರಿಣಾಮ ಕೆಲಕಾಲ ಆತಂಕ ಉಂಟಾಗಿತ್ತು.

ಸುದ್ದಿ ತಿಳಿದ ಜಯನಗರ ಪೊಲೀಸ್ ಠಾಣೆ ಸಬ್‍ಇನ್‍ಸ್ಪೆಕ್ಟರ್ ನವೀನ್, ವೃತ್ತ ನಿರೀಕ್ಷಕ ರಾಧಾಕೃಷ್ಣ ಅವರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.  ವಿಷಯ ತಿಳಿದ ಇನ್‍ಸ್ಪೆಕ್ಟರ್ ಚಂದ್ರಶೇಖರ್, ತುಮಕೂರು ಗ್ರಾಮಾಂತರ ವೃತ್ತ ನಿರೀಕ್ಷಕ ಮಧುಸೂದನ್ ಅವರು ಇತರೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಎರಡೂ ಕಡೆಯ ಮುಖಂಡರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಇದೇ ಸಂದರ್ಭದಲ್ಲಿ 7ನೇ ಕ್ರಾಸ್ ನಿವಾಸಿ ಹುಸೇನ್(17) ಅನಾರೋಗ್ಯದಿಂದ ಮೃತಪಟ್ಟಿದ್ದರಿಂದ ಅಂತ್ಯ ಸಂಸ್ಕಾರಕ್ಕೆ ಕುಟುಂಬ ವರ್ಗದವರು ಶವ ತೆಗೆದುಕೊಂಡು ಹೋಗುತ್ತಿದ್ದಾಗ ಮಫ್ತಿಯಲ್ಲಿದ್ದ ಚಂದ್ರಶೇಖರ್ ಮೆರವಣಿಗೆ ಎಂದು ತಪ್ಪಾಗಿ ಗ್ರಹಿಸಿ ಚದುರಿಸಲು ಮುಂದಾಗಿದ್ದಾರೆ.  ಇದರಿಂದಾಗಿ ನೂರಾರು ಮಂದಿ ರೊಚ್ಚಿಗೆದ್ದು ಚಂದ್ರಶೇಖರ್ ಅವರ ಮೇಲೆ ಹಲ್ಲೆ ನಡೆಸಿದಾಗವರಿಂದ ತಪ್ಪಿಸಿಕೊಂಡಿದ್ದಾರೆ

ಅಷ್ಟೊತ್ತಿಗಾಗಲೇ ವಿಷಯ ಕಾಡ್ಗಿಚ್ಚಿನಂತೆ ಹರಡಿ ಜನರು ಜಮಾಯಿಸಿದ್ದಾರೆ. ವಿಷಯ ತಿಳಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ಕರೆಸಿಕೊಂಡಿದ್ದಾರೆ.  ಘಟನೆ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಡಿವೈಎಸ್ಪಿ ಮಂಜುನಾಥ್, ತಿಪ್ಪೇಸ್ವಾಮಿ ವೆಂಕಟೇಶ್, ಆರು ಮಂದಿ ಇನ್‍ಸ್ಪೆಕ್ಟರ್‍ಗಳು, 12 ಮಂದಿ ಸಬ್‍ಇನ್‍ಸ್ಪೆಕ್ಟರ್‍ಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಎಸ್‍ಪಿ ಕೋನವಂಶಿ ಕೃಷ್ಣ ಪರಿಶೀಲನೆ ನಡೆಸಿದ್ದಾರೆ.  ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಡಿವೈಎಸ್ಪಿ ತಿಪ್ಪೇಸ್ವಾಮಿ, ಮಂಜುನಾಥ್, ಇನ್‍ಸ್ಪೆಕ್ಟರ್‍ಗಳಾದ ಚಂದ್ರಶೇಖರ್, ರಾಧಾಕೃಷ್ಣ, ಮಧುಸೂದನ್ ಆಗಮಿಸಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ