ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಗ್ರಾ.ಪಂ ಸದಸ್ಯರ ಸಾಮೂಹಿಕ ರಾಜೀನಾಮೆ..!

ಈ ಸುದ್ದಿಯನ್ನು ಶೇರ್ ಮಾಡಿ

ಕುಣಿಗಲ್, ಜು. 27- ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರಿಂದ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ 12 ಗ್ರಾ.ಪಂ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿರುವ ಘಟನೆ ನಡೆದಿದೆ. ತಾಲೂಕಿನ ಹುಲಿಯೂರುದುರ್ಗ ಗ್ರಾಮ ಪಂಚಾಯ್ತಿಯ ಒಟ್ಟು 22 ಸದಸ್ಯರ ಪೈಕಿ 12 ಸದಸ್ಯರು ಉಪಾಧ್ಯಕ್ಷ ಸೇರಿದಂತೆ ಗ್ರಾ.ಪಂ. ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಕಳೆದ 4ವರ್ಷಗಳಿಂದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮುನಾವರ ಜಹಾ ಹಾಗೂ ಪಿಡಿಒ ವಿನಾಯಕ ಇಬ್ಬರು ಸೇರಿ ವರ್ಗಾ 1ಹಾಗೂ 14ನೇ ಹಣಕಾಸು ಯೋಜನೆಯಡಿ 65 ಲಕ್ಷ ರೂ. ಹೆಚ್ಚು ಹಣಕ್ಕೆ ಕ್ರಿಯಾ ಯೋಜನೆ ಮಾಡದೆ ಖರ್ಚು ವೆಚ್ಚದ ಲೆಕ್ಕ ತೋರಿಸದೆ ಭ್ರಷ್ಟಾಚಾರ ಮಾಡಿದ್ದಾರೆಂದು ಸದಸ್ಯರು ಆರೋಪಿಸಿದ್ದಾರೆ.

ಈ ವಿಚಾರವಾಗಿ ಸದಸ್ಯರೆಲ್ಲರೂ ಪ್ರತಿಭಟನೆ ನಡೆಸಿ ಇವರ ವಿರುದ್ಧ ಕ್ರಮ ಕೈಗೊಳ್ಳಲು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಹುಲಿಯೂರುದುರ್ಗ ಗ್ರಾ.ಪಂನಲ್ಲಿ ಉತ್ತಮ ಆರ್ಥಿಕ ವಹಿವಾಟು ನಡೆಯುತ್ತಿದ್ದು ಕಂದಾಯ ವಸೂಲಿಯಲ್ಲೂ ಸಹ ಭ್ರಷ್ಟಾಚಾರ ಎಸಗಿದ್ದಾರೆ ಎಂದು ದೂರಿದ್ದಾರೆ.
ಇದರಿಂದ ಬೇಸತ್ತ ಉಪಾಧ್ಯಕ್ಷೆ ಲಲಿತಮ್ಮ ಸದಸ್ಯರಾದ ಪಂಕಜಮ್ಮ, ರವಿ, ಧನಂಜಯ, ಸುರೇಶ್, ಚಂದ್ರಶೇಖರ್, ನಾಗೇಶ್ ಮುಂತಾದವರು ರಾಜೀನಾಮೆಯನ್ನು ಅಧ್ಯಕ್ಷರಿಗೆ ನೀಡಿದ್ದು ಇಂದು ಮತ್ತು ನಾಳೆ ರಜೆ ಇರುವುದರಿಂದ ಸೋಮವಾರ ಉಪವಿಭಾಗಾಧಿಕಾರಿಗಳಿಗೆ ಮತ್ತೊಂದು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

Facebook Comments