ಮದುವೆಯಾಗಲು ಒಪ್ಪದ ಪ್ರೇಯಸಿಯ ಕುತ್ತಿಗೆ ಬಿಗಿದು ಪರಾರಿಯಾದ ಪಾಗಲ್ ಪ್ರೇಮಿ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಆ.16- ಮದುವೆಯಾಗುವಂತೆ ಪೀಡಿಸಿ ಪ್ರೇಯಸಿಯ ಕುತ್ತಿಗೆಯನ್ನು ವೇಲ್‍ನಿಂದ ಬಿಗಿದು ಕೊಲೆಗೆ ಯತ್ನಿಸಿ ಪಾಗಲ್ ಪ್ರೇಮಿ ಪರಾರಿಯಾಗಿರುವ ಘಟನೆ ಶಿರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿರಾ ತಾಲ್ಲೂಕು ಮದಲೂರು ಕ್ಷೇತ್ರದ ಜಿಪಂ ಸದಸ್ಯೆ ಲಕ್ಷ್ಮಿದೇವಿ ಅವರ ಪುತ್ರ ಮಹಾವೀರ್ ಗುಪ್ತ ಗುರುನಾನಕ್(21) ಪರಾರಿಯಾಗಿರುವ ಪಾಗಲ್ ಪ್ರೇಮಿ.

ಮದಲೂರು ನಿವಾಸಿಯಾದ ಮಹಾವೀರ್ ಹಾಗೂ ಜ್ಯೋತಿನಗರದಲ್ಲಿ ವಾಸವಾಗಿರುವ ಯುವತಿ ಚಿತ್ರದುರ್ಗದ ನರ್ಸಿಂಗ್ ಕಾಲೇಜಿನಲ್ಲಿ ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದು, ಇವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಯುವತಿಯನ್ನು ಮದುವೆಯಾಗುವಂತೆ ಮಹಾವೀರ್ ಒತ್ತಾಯಿಸುತ್ತಿದ್ದನು. ಯುವತಿ ಇನ್ನು ಎರಡು ಮೂರು ವರ್ಷ ಮದುವೆ ಬೇಡ.

ವ್ಯಾಸಂಗ ಮುಗಿಸಿ ನೌಕರಿ ಹಿಡಿದ ನಂತರ ಮದುವೆಯಾಗೋಣವೆಂದು ಹೇಳಿದರೂ ಆತ ಈಕೆಯ ಮಾತು ಕೇಳುತ್ತಿರಲಿಲ್ಲ. ನಿನ್ನೆ ಕಾಲೇಜಿಗೆ ರಜೆ ಇದುದ್ದರಿಂದ ಇವರಿಬ್ಬರು ಚಿತ್ರದುರ್ಗದಿಂದ ತಮ್ಮ ತಮ್ಮ ಮನೆಗಳಿಗೆ ಬಂದಿದ್ದರು. ನಿನ್ನೆ ಸಂಜೆ ಯುವತಿಯನ್ನು ತನ್ನ ಕಾರಿನಲ್ಲಿ ಕರೆದುಕೊಂಡು ರಾಷ್ಟ್ರೀಯ ಹೆದ್ದಾರಿ 4ರ ಲಿಂಗದಹಳ್ಳಿ ಗೇಟ್ ಬಳಿ ಬಂದಿದ್ದಾನೆ.

ಈ ವೇಳೆ ಮದುವೆ ಪ್ರಸ್ತಾಪವಾಗಿದೆ. ಇದಕ್ಕೆ ಯುವತಿ ಈಗಲೇ ಮದುವೆ ಬೇಡವೆಂದು ಹೇಳಿದ್ದಕ್ಕೆ ಕೋಪಗೊಂಡು ಆಕೆಯ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ತಾಳ್ಮೆ ಕಳೆದುಕೊಂಡು ಪಾಗಲ್ ಪ್ರೇಮಿ ಪ್ರೇಯಸಿಯ ವೇಲ್‍ನಿಂದ ಆಕೆಯ ಕುತ್ತಿಗೆ ಬಿಗಿದಿದ್ದಾನೆ. ಪ್ರಜ್ಞೆ ಕಳೆದುಕೊಂಡ ಪ್ರೇಯಸಿಯನ್ನು ನೋಡಿ ಸತ್ತಿದ್ದಾಳೆಂದು ಭಾವಿಸಿ ರಸ್ತೆಬದಿ ಮಲಗಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಕೆಲ ಸಮಯದ ಬಳಿಕ ಈಕೆಗೆ ಪ್ರಜ್ಞೆ ಬಂದಿದೆ. ತಕ್ಷಣ ತನ್ನ ಅಣ್ಣ ವಿಜಯ್‍ಗೆ ದೂರವಾಣಿ ಕರೆ ಮಾಡಿ ನಡೆದ ವಿಷಯವನ್ನು ತಿಳಿಸಿದ್ದಾಳೆ.

ಕೂಡಲೇ ಯುವತಿ ಕುಟುಂಬದವರು ಸ್ಥಳಕ್ಕೆ ತೆರಳಿ ಈಕೆಯನ್ನು ಕರೆದೊಯ್ದು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.  ಘಟನೆ ಸಂಬಂಧ ಯುವತಿಯ ಅಣ್ಣ ಶಿರಾ ಪೊಲೀಸರಿಗೆ ದೂರು ನೀಡಿದ್ದು, ಇನ್‍ಸ್ಪೆಕ್ಟರ್ ರಂಗಸ್ವಾಮಿ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ವೆಂಕಟೇಶ್ ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments