ಬ್ಯಾಂಕ್‍ನ ವ್ಯವಸ್ಥಾಪಕನ ಮನೆಗೆ ನುಗ್ಗಿ ಪತ್ನಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಆ.22- ಬ್ಯಾಂಕ್‍ನ ವ್ಯವಸ್ಥಾಪಕರೊಬ್ಬರ ಮನೆಗೆ ನುಗ್ಗಿ ಅವರ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ಕೆಲಸದಾಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಗುಳೂರಿನ ಲಿಂಗರಾಜು (35) ಶಿಕ್ಷೆಗೊಳಗಾದ ಆರೋಪಿ.

ಪ್ರಕರಣ ಹಿನ್ನೆಲೆ:
2013ರಲ್ಲಿ ಗುಳೂರಿನಲ್ಲಿರುವ ಎಸ್‍ಬಿಎಮ್ ಬ್ಯಾಂಕಿಗೆ ತೆರಳಿದ್ದ ಲಿಂಗರಾಜು ಹಲವು ದಾಖಲೆ ನೀಡಿ ಸಾಲ ಕೇಳಿದ್ದನಲ್ಲದೆ ನನ್ನ ಹೆಂಡ್ತಿ ಬ್ಯಾಂಕಿನಲ್ಲಿಟ್ಟಿರುವ ಹಣವನ್ನು ಕೊಡಿ ಎಂದು ಬ್ಯಾಂಕ್ ವ್ಯವಸ್ಥಾಪಕರಾದ ಸೂರ್ಯನಾರಾಯಣ್ ಬುದಿರ್ ಅವರಿಗೆ ಕೇಳಿಕೊಂಡಿದ್ದನು.

ಸೂರ್ಯನಾರಾಯಣ್ ಅವರು, ದಾಖಲೆಗಳನ್ನು ಪರಿಶೀಲಿಸಿ ದಾಖಲೆಗಳು ಸರಿಯಿಲ್ಲ, ಸಮರ್ಪಕವಾದ ದಾಖಲೆಗಳನ್ನು ತನ್ನಿ ಮತ್ತು ನಿಮ್ಮ ಪತ್ನಿಯ ಹೆಸರಿನಲ್ಲಿರುವ ಹಣವನ್ನು ನಿಮಗೆ ನೀಡಲಾಗುವುದಿಲ್ಲ. ನಿಮ್ಮ ಪತ್ನಿಯೇ ಬಂದು ಲಿಖಿತವಾಗಿ ಬರೆದುಕೊಟ್ಟರೆ ಹಣ ನೀಡಲು ಸಾಧ್ಯ ಎಂದು ಹೇಳಿದ್ದರು.
ಇದರಿಂದ ಕುಪಿತಗೊಂಡ ಲಿಂಗರಾಜು ಬ್ಯಾಂಕ್‍ನ ವ್ಯವಸ್ಥಾಪಕರ ಹತ್ಯೆಗೆ ಸಂಚು ರೂಪಿಸಿದನು. ತುಮಕೂರಿನ ರೈಲ್ವೆ ಸ್ಟೇಶನ್ ಬಳಿ ಇರುವ ಮನೆಗೆ ಬ್ಯಾಂಕಿನ ವ್ಯವಸ್ಥಾಪಕರು ಬರುವ ಹಾಗೂ ಹೋಗುವ ಮಾಹಿತಿಯನ್ನು ಕಲೆ ಹಾಕಿದ್ದನು.

2013 ಆ. 8ರಂದು ಸೂರ್ಯನಾರಾಯಣ್ ಕೆಲಸಕ್ಕೆ ಹೋಗುವ ದಾರಿಯನ್ನೇ ಕಾದು ಕುಳಿತಿದ್ದನು. ಆದರೆ ಅವರು ಅಂದು ಆ ದಾರಿಯಲ್ಲಿ ಬರದೇ ಇರುವುದರಿಂದ ಲಿಂಗರಾಜು ಸೀದಾ ಇವರ ಮನೆಗೆ ತೆರಳಿ ಮನೆ ಕೆಲಸದಾಕೆ ಜಯಮ್ಮನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಜಯಮ್ಮನ ಕಿರುಚಾಟದಿಂದ ವ್ಯವಸ್ಥಾಪಕರ ಪತ್ನಿ ನಿರ್ಮಲಾ ಹೊರಗೆ ಬರುತ್ತಿದ್ದಂತೆ ಅವರ ಮೇಲೂ ಮಾರಾಕಾಸ್ತ್ರದಿಂದ ಹಲ್ಲೆ ನಡೆಸಿದ್ದಾಗ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಇದಕ್ಕೆ ಸಂಬಂಧಪಟ್ಟಂತೆ ತಿಲಕ್ ಪಾರ್ಕ್ ವೃತ್ತ ನಿರೀಕ್ಷಕ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ, ಡಿವೈಎಸ್‍ಪಿ ಚಿದಾನಂದ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆಯನ್ನು ವೃತ್ತ ನಿರೀಕ್ಷಕ ರಾಘವೇಂದ್ರ ಅವರಿಗೆ ವಹಿಸಿದ್ದರು.

ವೃತ್ತ ನಿರೀಕ್ಷಕ ರಾಘವೇಂದ್ರ ಅವರು ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ.ಎಸ್.ದೇಶಪಾಂಡೆ ಅವರು, ಆರೋಪಿಗೆ ಜೀವಾವಧಿ ಶಿಕ್ಷೆ, ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 10ಸಾವಿರ, ಮನೆಗೆ ಅಕ್ರಮವಾಗಿ ಪ್ರವೇಶಸಿದ್ದಕ್ಕೆ 10ಸಾವಿರ, ಮೃತಪಟ್ಟ ಮಹಿಳೆಯ ಪತಿಗೆ ಪರಿಹಾರವಾಗಿ 20ಸಾವಿರ, ಗಾಯಾಳು ಮಹಿಳೆಗೆ 10ಸಾವಿರ ದಂಡ ನೀಡಲು ಆದೇಶಿಸಿದ್ದಾರೆ.

ಅಭಿನಂದನೆಗಳ ಮಹಾಪೂರ
ವೃತ್ತ ನಿರೀಕ್ಷಕ ರಾಘವೇಂದ್ರ ಅವರು ಈ ಪ್ರಕರಣವನ್ನು ಬೇಧಿಸಿದಕ್ಕೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

Facebook Comments