ತುಮಕೂರಿನಲ್ಲಿ ನಿಷೇಧಿತ ಗನ್ ಪತ್ತೆ, ಭಯೋತ್ಪಾದಕರಾ ಹಳೇ ನಂಟು..?
ತುಮಕೂರು,ಸೆ.5- ಕಲ್ಪತರು ನಾಡಿಗೂ ಭಯೋತ್ಪಾದಕರಿಗೂ ಹಳೇ ನಂಟು. ಈ ಹಿಂದೆ ಚಿನ್ನಸ್ವಾಮಿ ಸ್ಟೇಡಿಯಂ ಸ್ಪೋಟದ ಬಾಂಬ್ ತಯಾರಾಗಿದ್ದು ಇಲ್ಲೇ. ಇದೀಗ ಯುಎಸ್ಎ ನಿರ್ಮಿಸಿರುವ ನಿಷೇಧಿತ ಗನ್ ಸಿಕ್ಕಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ. ಅಮೆರಿಕದಲ್ಲಿ ಮಾತ್ರ ಬಳಕೆ ಮಾಡಲು ಅವಕಾಶವಿರುವ ನಿಷೇಧಿತ ಎಫ್ಎಕ್ಸ್ ಬಾಕ್ಸ್ ಏರ್ಗನ್ ಸ್ಥಳೀಯ ಯುವಕರ ಕೈಸೇರಿದ್ದು ಹೇಗೆ ಎಂಬ ಪ್ರಶ್ನೆ ಪೊಲೀಸರ ನಿದ್ದೆಗೆಡಿಸಿದೆ.
#ನಡೆದಿದ್ದೇನು?:
ಜಯನಗರ ಮತ್ತು ತಿಲಕ್ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮ ಮುಗಿಸಿ ರಾತ್ರಿ ಗಸ್ತಿನಲ್ಲಿದ್ದ ಜಯನಗರ ಠಾಣೆ ಸಬ್ಇನ್ಸ್ಪೆಕ್ಟರ್ ನವೀನ್ ಇಂದು ಮುಂಜಾನೆ ಇನ್ನೇನು ಮನೆ ಕಡೆ ಹೋಗಬೇಕೆನ್ನುವ ಸಂದರ್ಭದಲ್ಲಿ ಉಪ್ಪಾರಹಳ್ಳಿ ಸಮೀಪ ಮಾರುತಿ 800 ಕಾರು ಅನುಮಾನಸ್ಪದವಾಗಿ ನಿಂತಿತ್ತು.
ನವೀನ್ ಹತ್ತಿರ ಹೋದಾಗ ಕಾರಿನಲ್ಲಿದ್ದ ನಾಲ್ವರು ಗಲಿಬಿಲಿಗೊಂಡು ಪರಾರಿಯಾಗಲು ಯತ್ನಿಸಿದರು. ತಕ್ಷಣ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಗುಬ್ಬಿ ನವೀನ್ ಟೀಮ್ ಎಂದು ತಿಳಿದುಬಂದಿತು. ಅನುಮಾನಗೊಂಡ ವಾಹನ ಪರಿಶೀಲಿಸಿದಾಗ ಕಾರಿನಲ್ಲಿ ಅಮೆರಿಕದ ಎಫ್ ಎಕ್ಸ್ ಬಾಕ್ಸ್ ಡಿಸಿಬಿ 125 ಸೌಂಡ್ಲೆಸ್ ಗನ್ ಇದದ್ದು ಪೊಲೀಸರನ್ನು ಬೆಚ್ಚಿಬೀಳಿಸಿತು.ಭಾರತದಲ್ಲಿ ಎಫ್ಎಕ್ಸ್ ಗನ್ಗೆ ನಿಷೇಧವಿದ್ದರೂ ತುಮಕೂರಿನ ಯುವಕರ ಬಳಿ ಪತ್ತೆಯಾದದ್ದು ಹೇಗೆ ಎಂಬುದು ಪೊಲೀಸರ ಚಿಂತೆಗೀಡು ಮಾಡಿದೆ.
ಬಂಧಿತರಾಗಿರುವ ನಾಲ್ಕು ಆರೋಪಿಗಳಲ್ಲಿ ನವೀನ್ ಎಂಬಾತ ಈ ಹಿಂದೆ ಇದೇ ಗನ್ ಬಳಕೆ ಮಾಡಿ ನವಿಲು ಬೇಟೆಯಾಡಿದ್ದ ಈ ಕುರಿತಂತೆ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್ಎಕ್ಸ್ ಗನ್ ಲೈಸೆನ್ಸ್ ಪಡೆದು ಯುಎಸ್ಎಯಲ್ಲಿ ಖರೀದಿ ಮಾಡಬೇಕು. ಆದರೆ ಯಾವುದೇ ಪರವಾನಗಿ ಇಲ್ಲದೆ ಈ ಗನ್ಗಳು ಭಾರತಕ್ಕೆ ಬಂದದ್ದು ಹೇಗೆ? ಎಂಬುದು ನಿಗೂಢವಾಗಿದೆ.
ಈ ಬೆಳವಣಿಗೆಗಳನ್ನು ಗಮನಿಸಿದರೆ ಕಲ್ಪತರು ನಾಡಿನಲ್ಲಿ ಗನ್ ಮಾಫಿಯ ತಲೆ ಎತ್ತಿದೆ ಎಂಬ ಗುಮಾನಿ ಕಾಡುತ್ತಿದೆ. ತುಮಕೂರು, ಬೆಂಗಳೂರು, ಹಾಸನ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಿಗೆ ಗುಬ್ಬಿ ಮೂಲದ ಕೇಂದ್ರ ಸ್ಥಾನದಿಂದಲೇ ನಿಷೇಧಿತ ಗನ್ ಸರಬರಾಜಾಗುತ್ತಿದೆ ಎಂಬ ಮಹತ್ವದ ಸುಳಿವು ಪೊಲೀಸರಿಗೆ ಲಭ್ಯವಾಗಿದೆ.
ನಿಷೇಧಿತ ಗನ್ ಪತ್ತೆಯಾಗುತ್ತಿದ್ದಂತೆ ಜಿಲ್ಲೆಯ ಪ್ರಭಾವಿ ಶಾಸಕರೊಬ್ಬರು ಇಡೀ ಪ್ರಕರಣವನ್ನು ಮುಚ್ಚಿ ಹಾಕುವಂತೆ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಯಾವುದೇ ಒತ್ತಡಕ್ಕೆ ಮಣಿಯದ ಎಸ್ಪಿ ಡಾ.ಕೋನವಂಶಿಕೃಷ್ಣ ಮತ್ತವರ ತಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ತೀವ್ರಗೊಳಿಸಿದ್ದು, ಗನ್ ಮಾಫಿಯಾದ ಬಂಡವಾಳ ಬಯಲು ಮಾಡಲು ಸದ್ದಿಲ್ಲದೆ ಕಾರ್ಯಾಚರಣೆ ಆರಂಭಿಸಿದೆ.