ಮೀಟರ್ ಬಡ್ಡಿ ಸುಳಿಗೆ ಸಿಕ್ಕಿ 4 ವರ್ಷ ಜೀತ ಮಾಡಿದ ರೈತ ಕುಟುಂಬ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಸೆ.23- ರೈತರ ಕುಟುಂಬವೊಂದು ಮೀಟರ್ ಬಡ್ಡಿ ದಂಧೆಕೋರರ ಜಮೀನಿನಲ್ಲಿ ನಾಲ್ಕು ವರ್ಷ ಜೀತದಾಳುಗಳಾಗಿ ಕೆಲಸ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ಮಿತಿ ಮೀರಿದ್ದು, ದಂಧೆಕೋರರು ರೈತರನ್ನೇ ಟಾರ್ಗೆಟ್ ಮಾಡಿಕೊಂಡು ರೈತರ ಕೃಷಿ ಜಮೀನನ್ನು ಕಬಳಿಸುತ್ತಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇತ್ತ ಗಮನ ಹರಿಸಿ ನೊಂದವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಜಿಲ್ಲೆಯ ಶಿರಾ ತಾಲ್ಲೂಕಿನ ಹುಂಜನಾಳು ಗ್ರಾಮದ ರೈತ ಈರಣ್ಣ ಇದೇ ಗ್ರಾಮದ ಜೈಶೀಲ ಎಂಬ ಮಹಿಳೆ ಬಳಿ 1.80 ಲಕ್ಷ ರೂ. ಸಾಲ ಪಡೆದಿದ್ದರು ಎನ್ನಲಾಗಿದೆ. ಸಾಲ ಕೊಡುವ ವೇಳೆ ಈರಣ್ಣನ ಜೀವನಾಧಾರವಾಗಿದ್ದ 33 ಗುಂಟೆ ಜಮೀನನ್ನು ಅಡಮಾನವಾಗಿಟ್ಟುಕೊಂಡು ಸಾಲದ ಕ್ರಯ ಮಾಡಿಸಿಕೊಂಡು ಸಾಲ ತೀರಿದ ನಂತರ ಪುನಃ ಜಮೀನು ಹಿಂತಿರುಗಿಸುವುದಾಗಿ ಹೇಳಿದ್ದಾರೆ.

ಆದರೆ, ಸಾಲ ತೀರಿಸಲಾಗದೆ ಈ ಮಹಿಳೆಯ ಜಮೀನಿನಲ್ಲೇ ನಾಲ್ಕು ವರ್ಷ ಜೀತದಾಳಾಗಿ ಕೆಲಸ ಮಾಡಿರುವ ಈ ರೈತರ ಕುಟುಂಬಕ್ಕೆ ಯಾವುದೇ ಕೂಲಿ ಸಹ ನೀಡಿಲ್ಲ. ಬದಲಾಗಿ ಕಳೆದ ನಾಲ್ಕು ವರ್ಷದಿಂದ ಬಡ್ಡಿ-ಚಕ್ರಬಡ್ಡಿ ಸೇರಿ 9 ಲಕ್ಷ ಆಗಿದೆ ಈ ಹಣ ಕೊಟ್ಟು ಜಮೀನು ಬಿಡಿಸಿಕೊಳ್ಳುವಂತೆ ಈರುಣ್ಣ ಕುಟುಂಬಕ್ಕೆ ಹೇಳಿದ್ದಾರೆಂದು ಸ್ಥಳೀಯ ನಿವಾಸಿ ಚಿಕ್ಕಣ್ಣ ದೂರಿದ್ದಾರೆ.

ಇತ್ತೀಚೆಗೆ ಗುಬ್ಬಿ ತಾಲ್ಲೂಕಿನ ಇಡಕನಹಳ್ಳಿ ಗ್ರಾಮದ ಶಂಕರಲಿಂಗಪ್ಪ ಎಂಬ ರೈತ ಸಹ ಸಾಲ ಪಡೆದು ಮೀಟರ್ ಬಡ್ಡಿ ದಂಧೆ ಸುಳಿಗೆ ಸಿಲುಕಿದ್ದಾಗಿ ಇದೇ ಮಹಿಳೆ ವಿರುದ್ಧ ದೂರಿದ್ದರು.
ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಶಿರಾ ತಾಲ್ಲೂಕಿನ ಹುಂಜನಾಳು ಗ್ರಾಮದ ಈರಣ್ಣ ತಮ್ಮ ದಾಖಲೆ ಪತ್ರ ಮೂಲಕ ಜೈಶೀಲಾ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾರೆ.
ಜೀವನಾಧಾರವಾದ ನಮ್ಮ ಜಮೀನುಗಳನ್ನು ಈ ಮಹಿಳೆಯಿಂದ ಬಿಡಿಸಿಕೊಡದಿದ್ದರೆ ಆತ್ಮಹತ್ಯೆ ದಾರಿ ಹಿಡಿಯುಬೇಕಾಗುತ್ತದೆ ಎಂದು ಅಲವತ್ತುಕೊಂಡಿದ್ದಾರೆ.

ಮೀಟರ್ ಬಡ್ಡಿದಂಧೆ ಸುಳಿಗೆ ಸಿಲುಕಿರುವ ರೈತರನ್ನು ರಕ್ಷಿಸಿ ಜಮೀನು ಪತ್ರಗಳನ್ನು ವಾಪಸ್ ಕೊಡಿಸುವಂತೆ ಚೇಳೂರು ಪೊಲೀಸ್ ಠಾಣೆಗೆ ಶಂಕರಪ್ಪ ದೂರು ನೀಡಿದ್ದಾರೆ.
ಮೀಟರ್ ಬಡ್ಡಿಗೆ ಜಮೀನು ಕಳೆದುಕೊಂಡಿರುವ ರೈತರ ಪ್ರಕರಣಗಳು ದಿನದಿಂದ ದಿನಕ್ಕೆ ಬೆಳಕಿಗೆ ಬರುತ್ತಿದ್ದು, 21ನೇ ಶತಮಾನದಲ್ಲೂ ಜೀತ ಪದ್ಧತಿ ಜೀವಂತವಾಗಿದೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ.

ಈ ಪ್ರಕರಣವನ್ನು ಜಿಲ್ಲಾ ಎಸ್‍ಪಿ ಅವರು ಕೂಲಂಕಷವಾಗಿ ಪರಿಗಣಿಸಿ ನೊಂದ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಪೊಲೀಸರಲ್ಲಿ ಮನವಿ ಮಾಡಲಾಗಿದೆ.ತಕ್ಷಣವೇ ಇಂತಹ ಪ್ರಕರಣಗಳ ಬಗ್ಗೆ ಖುದ್ದು ಮಾಹಿತಿ ಪಡೆದು ಮೀಟರ್ ಬಡ್ಡಿಗೆ ಕಡಿವಾಣ ಹಾಕುವ ಮೂಲಕ ರೈತರ ಜಮೀನುಗಳನ್ನು ರಕ್ಷಿಸಲು ಎಸ್‍ಪಿ ಕೋನವಂಶಿಕೃಷ್ಣ ಅವರು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಸೂಚಿಸಬೇಕೆಂದು ನೊಂದ ರೈತರು ಅಳಲು ತೋಡಿಕೊಂಡಿದ್ದಾರೆ.

Facebook Comments