ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ, ಖಾಸಗಿ ಬಸ್ ಅಪಘಾತದಲ್ಲಿ ಚಾಲಕ ಸೇರಿ ಮೂವರು ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ನ.೩- ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು ರಾಷ್ಟ್ರೀಯ ಹೆದ್ದಾರಿ 47ರಲ್ಲಿ ಸಂಭವಿಸಿದ ಅಪಘಾತದಲ್ಲಿ ಬಸ್‌ನ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.  ಏಷ್ಯನ್ ಟ್ರಾವೆಲ್ಸ್ ಬಸ್ ಚಾಲಕ ಪಾಷಾ ಫೀರ್(45) ಹಾಗೂ ಬಸ್‌ನ ಕ್ಯಾಬಿನ್ ಹಿಂಭಾಗ ಕುಳಿತಿದ್ದ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, ಇವರ ಹೆಸರು, ವಿಳಾಸ ಸದ್ಯಕ್ಕೆ ತಿಳಿದುಬಂದಿಲ್ಲ.

ಬೆಳಗಾವಿಯಿಂದ ಬೆಂಗಳೂರಿಗೆ ಬರುತ್ತಿದ್ದ ಏಷ್ಯನ್ ಟೂರ್ ಟ್ರಾವೆಲ್ಸ್ ಬಸ್‌ನಲ್ಲಿ 38 ಪ್ರಯಾಣಿಕರು ಸೇರಿ ಇಬ್ಬರು ಚಾಲಕರಿದ್ದರು. ಈ ಐಷರಾಮಿ ಬಸ್ ಬೆಂಗಳೂರು ಕಡೆ ಬರುತ್ತಿದ್ದಾಗ ಬೆಳಗ್ಗೆ 7.30ರ ಸುಮಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 48ರ ಊರುಕೆರೆ ಸಮೀಪದ ರಂಗಾಪುರ ಬಳಿ ಮುಂದೆ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕಿಲು ಬಸ್ ಅತಿ ವೇಗವಾಗಿ ಮುನ್ನುಗ್ಗಿದ್ದಾಗ ನಿಯಂತ್ರಣ ತಪ್ಪಿ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಲಾರಿ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಅಡ್ಡಲಾಗಿ ಮಗುಚಿಬಿದ್ದಿದೆ. ಪರಿಣಾಮ ಬಸ್ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದಿಂದಾಗಿ 8ಮಂದಿ ಗಾಯಗೊಂಡಿದ್ದು, ತಕ್ಷಣ ನೆರವಿಗೆ ಬಂದ ಸುತ್ತಮುತ್ತಲ ಗ್ರಾಮಸ್ಥರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು.

ಬಸ್‌ನಲ್ಲಿದ್ದ ಮತ್ತೊಬ್ಬ ಚಾಲಕ ಉಲ್ಲಾಖಾನ್(42) ಗಂಭೀರ ಗಾಯಗೊಂಡಿದ್ದಾರೆ. ಈ ಬಸ್‌ನ ಇಬ್ಬರು ಚಾಲಕರು ತುಮಕೂರು ಜಿಲ್ಲೆಯ ಕುಣಿಗಲ್ ಜಿಲ್ಲೆಯವರು. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಲಾರಿ ಲಕ್ಸ್ ಸೋಪುಗಳನ್ನು ಸಾಗಿಸುತ್ತಿತ್ತು. ರಸ್ತೆಯಲ್ಲಿ ಲಾರಿ ಉರುಳಿ ಬಿದ್ದಿದ್ದರಿಂದ ರಸ್ತೆ ತುಂಬ ಲಕ್ಸ್ ಸೋಪುಗಳು ಚೆಲ್ಲಾಪಿಲ್ಲಿಯಾಗಿದ್ದವು. ಸುತ್ತಮುತ್ತಲ ಗ್ರಾಮಸ್ಥರು ತಮಗೆ ಬೇಕಾದಷ್ಟು ಸೋಪುಗಳನ್ನು ತುಂಬಿಕೊಂಡು ಹೋಗುತ್ತಿದುದು ಕಂಡುಬಂತು.

ಗಾಯಾಳುಗಳ ಚೀರಾಟ: ಅಪಘಾತ ಸ್ಥಳದಲ್ಲಿ ಗಾಯಾಳುಗಳು ಕೈಕಾಲುಗಳನ್ನು ಕಳೆದುಕೊಂಡು ಚೀರಾಡುತ್ತಿದ್ದರು. ಕೈಕಾಲು ಕಳೆದುಕೊಂಡವರು, ನಮ್ಮ ಬದುಕು ಮೂರಾ ಬಟ್ಟೆಯಾಯಿತ್ತಲ್ಲ ಎಂದು ರೋಧಿಸುತ್ತಿದದ್ದು ನೋಡುಗರ ಕಣ್ಣಲ್ಲಿ ನೀರು ತುಂಬಿಕೊಂಡಿತು.  ಗಂಭೀರವಾಗಿ ಗಾಯಗೊಂಡಿದ್ದವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಹಾಗೂ ತುಮಕೂರಿನ ಟಿ.ಎಚ್.ಎಸ್ ಹಾಗೂ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಾರಿ ಚಾಲಕ ಹಾಗೂ ಕ್ಲೀನರ್ ಸಹ ಗಂಭೀರ ಗಾಯಗೊಂಡಿದ್ದು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.  ಸ್ಥಳಕ್ಕೆ ಎಸ್‌ಪಿ ಕೋನವಂಶಿಕೃಷ್ಣ, ಹೆಚ್ಚುವರಿ ಎಸ್‌ಪಿ ಉದ್ದೇಶ್, ಸಬ್‌ಇನ್‌ಸ್ಪೆಕ್ಟರ್ ಲಕ್ಷ್ಮಯ್ಯ, ಡಿವೈಎಸ್ಪಿ ತಿಪ್ಪೇಸ್ವಾಮಿ, ವೃತ್ತ ನಿರೀಕ್ಷಕ ರಾಮಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments