ಕುಣಿಗಲ್ ಬಳಿ ಭೀಕರ ರಸ್ತೆ ಅಪಘಾತ, ಒಂದೇ ಕುಟುಂಬದ 10 ಮಂದಿ ಸೇರಿ 13 ಜನ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಕುಣಿಗಲ್,ಮಾ.6-ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತವೇರಾ ಕಾರು ಹಾಗೂ ಬ್ರಿಜಾ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಹತ್ತು ಮಂದಿ ಸೇರಿ 13 ಮಂದಿ ದಾರುಣವಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಮೃತಪಟ್ಟ ದುರ್ದೈವಿಗಳನ್ನು ತವೇರಾ ಕಾರಿನಲ್ಲಿದ್ದ ಮೂಲತಃ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಗ್ರಾಮದವರಾದ ಮಂಜುನಾಥ್ ಸೀಕನಪಲ್ಲಿ(35), ಪತ್ನಿ ತನುಜಾ(28) ಮತ್ತು ಇವರ ಎಂಟು ತಿಂಗಳ ಮಗು ಹಾಗೂ ಸಂಬಂಧಿಗಳಾದ ಸುಂದರ್‍ರಾಜ್(48), ತ್ರಿಶನ್ಯ(14), ಗೌರಮ್ಮ(60), ರತ್ನಮ್ಮ(52), ಸರಳ(32), ತವೇರ ವಾಹನದ ಚಾಲಕ ರಾಜೇಂದ್ರ(27), ಮಾಲ್ಯಶ್ರೀ(4), ಚೇತನ್ ಮತ್ತು ಬ್ರಿಜಾ ಕಾರಿನಲ್ಲಿದ್ದ ಬೆಂಗಳೂರಿನ ಹುಣಸೇಮರದಪಾಳ್ಯದ ಲಕ್ಷ್ಮಿಕಾಂತ(28), ಗೇರುಪಾಳ್ಯದ ಸಂದೀಪ(36), ರಾಮೋಹಳ್ಳಿಯ ಮಧು(20) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಶ್ವೇತಾ, ಹರ್ಷಿತಾ, ಗಂಗೋತ್ರಿ ಹಾಗೂ ಬ್ರಿಜಾ ಕಾರಿನಲ್ಲಿದ್ದ ಪ್ರಕಾಶ ಅವರನ್ನು ಜಿಲ್ಲಾ ಹಾಗೂ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.  ಮಂಜುನಾಥ ಮತ್ತು ತನುಜಾ ದಂಪತಿಯ ಪುತ್ರ ಎಂಟು ತಿಂಗಳ ಮಗುವಿಗೆ ಧರ್ಮಸ್ಥಳದಲ್ಲಿ ಮುಡಿಕೊಡಿಸಿ, ಶ್ರೀಮಂಜುನಾಥನ ದರ್ಶನ ಪಡೆದು ಸಂಬಂಧಿಗಳೊಂದಿಗೆ ತವೇರಾ ಕಾರಿನಲ್ಲಿ ತಮಿಳುನಾಡಿಗೆ ವಾಪಸ್ಸಾಗುತ್ತಿದ್ದರು.

ಇಂದು ಮುಂಜಾನೆ 1.30ರ ಸುಮಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಹಾಸನ ರಸ್ತೆಯ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಅಮೃತೂರು ವ್ಯಾಪ್ತಿಯ ಬ್ಯಾಲದಕೆರೆ ಗೇಟ್ ಬಳಿ ಬೆಂಗಳೂರಿನಿಂದ ಹೋಗುತ್ತಿದ್ದ ಬ್ರಿಜಾ ಕಾರು ಏಕಾಏಕಿ ಯೂಟರ್ನ್ ತೆಗೆದುಕೊಳ್ಳುತ್ತಿದ್ದಂತೆ ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಪಕ್ಕದ ರಸ್ತೆಗೆ ನುಗ್ಗಿ ಧರ್ಮಸ್ಥಳದಿಂದ ಬರುತ್ತಿದ್ದ ತವೇರಾ ಕಾರಿಗೆ ಗುದ್ದಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ತವೇರಾ ಕಾರಿನಲ್ಲಿದ್ದ 9 ಮಂದಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟರೆ ನಾಲ್ಕು ವರ್ಷದ ಮಾಲ್ಯಶ್ರೀ ಚಿಕಿತ್ಸೆ ಫಲಿಸದೆ ಸ್ಪರ್ಶ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.  ಬ್ರಿಜಾ ಕಾರಿನಲ್ಲಿದ್ದ ಲಕ್ಷ್ಮಿಕಾಂತ , ಸಂದೀಪ, ಮಧು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬ್ರಿಜಾ ಕಾರನ್ನು ಚಾಲನೆ ಮಾಡುತ್ತಿದ್ದ ಲಕ್ಷ್ಮಿಕಾಂತ, ಮೂವರು ಸ್ನೇಹಿತರೊಂದಿಗೆ ಎಲ್ಲಿಗೆ ಹೋಗುತ್ತಿದ್ದರು ಎಂಬುದು ತಿಳಿದುಬಂದಿಲ್ಲ. ಇವರೆಲ್ಲ ರಿಯಲ್ ಎಸ್ಟೇಟ್ ನಡೆಸುತ್ತಿದ್ದರು ಎನ್ನಲಾಗಿದೆ. ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆಯಿಂದ ಈ ಅಪಘಾತ ಸಂಭವಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.  ಸುದ್ದಿ ತಿಳಿಯುತ್ತಿದ್ದಂತೆ ಎಸ್‍ಪಿ ಕೋನವಂಶಿಕೃಷ್ಣ, ಐಜಿಪಿ ಶರತ್‍ಚಂದ್ರ, ಸಿಪಿಐ ನಿರಂಜನ್‍ಕುಮಾರ್, ಪಿಎಸ್‍ಐಗಳಾದ ವಿಕಾಸ್‍ಗೌಡ, ಪುಟ್ಟೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಮೃತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ.

ಅಕ್ರಂಧನ:  ಮಗುವಿನ ಮುಡಿ ತೆಗೆಸಲು ಧರ್ಮಸ್ಥಳಕ್ಕೆ ಹೋಗಿದ್ದ ಕುಟುಂಬಸ್ಥರು ಇಂದು ವಾಪಸ್ಸಾಗುತ್ತಿದ್ದಾರೆ ಎಂಬ ಖುಷಿಯಲ್ಲಿದ್ದ ಸಂಬಂಧಿಕರಿಗೆ ಅಪಘಾತದ ಸುದ್ದಿ ತಿಳಿದು ಸಿಡಿಲು ಬಡಿದಂತಾಗಿದೆ. ಕುಟುಂಬಸ್ಥರ ಆಕ್ರಂಧ ಮುಗಿಲುಮುಟ್ಟಿತ್ತು. ಹೊಸೂರಿನ ಸೀಕನಪಲ್ಲಿಯಲ್ಲಿ ಸ್ಮಶಾನಮೌನ ಆವರಿಸಿದೆ.  ಮಕ್ಕಳನ್ನು, ಸಂಬಂಧಿಕರನ್ನು ಕಳೆದುಕೊಂಡು ಕುಟುಂಬ ವರ್ಗದವರು ಆಸ್ಪತ್ರೆ ಶವಾಗಾರದ ಮುಂದೆ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಇತ್ತ ಬ್ರಿಜಾ ಕಾರಿನಲ್ಲಿದ್ದ ಬೆಂಗಳೂರು ಮೂಲದ ಯುವಕರು ಮೃತಪಟ್ಟಿರುವ ಸುದ್ದಿ ತಿಳಿದು ಕುಟುಂಬಸ್ಥರ ರೋಧನ ಹೇಳತೀರದಾಗಿತ್ತು.

Facebook Comments