ಖತರ್ನಾಕ್ ಕಳ್ಳನ ಬಂಧನ : 5 ಲಕ್ಷ ಮೌಲ್ಯದ 14 ಬೈಕ್‍ಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಆ.23-ವಿವಿಧ ಕಡೆಗಳಲ್ಲಿ ಮೋಟಾರ್ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಖತರ್ನಾಕ್ ಕಳ್ಳನನ್ನು ಕ್ಯಾತಸಂದ್ರ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಅನಂತಪುರ ಜಿಲ್ಲೆ ಅರೆಸಮುದ್ರಂ ನಿವಾಸಿ ನರಸಿಂಹ ಮೂರ್ತಿ (30) ಬಂಧಿತ ಆರೋಪಿಯಾಗಿದ್ದು, ಈತ ತುಮಕೂರು ಪಟ್ಟಣದ ಹಳೇ ದೇವರಾಯಪಟ್ಟಣದಲ್ಲಿ ಪ್ರಸ್ತುತ ವಾಸವಾಗಿದ್ದನು.

ಕಳೆದ 2013ರಲ್ಲಿ ಬೆಂಗಳೂರು, ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ ಕಡೆಗಳಲ್ಲಿ ಮೋಟಾರ್‍ಬೈಕ್‍ಗಳನ್ನು ಕಳ್ಳತನ ಮಾಡಿದ್ದು, ಈತನ ಬಂಧನದಿಂದ ಹಲವು ಪ್ರಕರಣಗಳು ಪತ್ತೆಯಾದಂತಾಗಿದೆ. ಆ.21 ರಂದು ಕ್ಯಾತಸಂದ್ರ ವ್ಯಾಪ್ತಿಯ ಹಿರೇಗಹಳ್ಳಿ ಕೈಗಾರಿಕಾ ಪ್ರದೇಶದ ಹಿಂಭಾಗದಲ್ಲಿರುವ ಸಿಂಗೋನಹಳ್ಳಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಬೈಕನ್ನು ತಳ್ಳಿಕೊಂಡು ಹೋಗುತ್ತಿದ್ದಾಗ ಗಸ್ತಿನಲ್ಲಿ ಕ್ಯಾತಸಂದ್ರ ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ.

ಈತನಿಂದ 5 ಲಕ್ಷ ರೂ. ಮೌಲ್ಯದ 14 ಮೋಟಾರ್‍ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. 2016ರಲ್ಲಿ ಗೌರಿಬಿದನೂರು ಪೊಲೀಸರು ಈತನನ್ನು ಬಂಧಿಸಿ 18 ಬೈಕ್‍ಗಳನ್ನು ವಶಪಡಿಸಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಆರೋಪಿ ವಿರುದ್ಧ ಗೌರಿಬಿದನೂರು, ದೊಡ್ಡಬಳ್ಳಾಪುರ, ಯಲಹಂಕ ಠಾಣೆಗಳಲ್ಲೂ ಸಹ ಕಳವು ಪ್ರಕರಣಗಳು ದಾಖಲಾಗಿವೆ. ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನವಂಶಿಕೃಷ್ಣ, ಹೆಚ್ಚುವರಿ ಎಸ್‍ಪಿ ಡಾ.ಶೋಭಾರಾಣಿ ಮಾರ್ಗದರ್ಶನದಲ್ಲಿ ನಗರ ಉಪವಿಭಾಗದ ಪೊಲೀಸ್ ಉಪಅಧೀಕ್ಷಕ ತಿಪ್ಪೇಸ್ವಾಮಿ, ಕ್ಯಾತಸಂದ್ರ ವೃತ್ತನಿರೀಕ್ಷಕರಾದ ಶ್ರೀಧರ್ ನೇತೃತ್ವದಲ್ಲಿ ಪಿಎಸ್‍ಐ ರಾಜು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ ಆಭಿನಂದಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ