ಜೈಲಿನಲ್ಲಿದ್ದುಕೊಂಡೆ ಹಫ್ತಾ ವಸೂಲಿಗಿಳಿದಿದ್ದ ಆರೋಪಿ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಸೆ.12- ಜೈಲಿನಲ್ಲಿದ್ದುಕೊಂಡೇ ಹಫ್ತಾ ವಸೂಲಿಗೆ ಇಳಿದಿದ್ದ ಆರೋಪಿಯ ವಿಚಾರಣೆ ಮಾಡಲು ಕರೆ ತಂದಾಗ ಕೊರೊನಾ ಸೋಂಕಿರುವುದು ಖಚಿತವಾಗಿ ವಿಚಾರಣೆ ನಡೆಸದೆ ಆರೋಪಿಯನ್ನು ಮತ್ತೆ ಜೈಲಿಗೆ ವಾಪಾಸ್ ಕಳುಹಿಸಲಾಗಿದೆ.

ತುಮಕೂರಿನ ಹೈಪ್ರೋಫೈಲ್ ಪ್ರಕರಣದಲ್ಲಿ ಒಂದಾಗಿರುವ ಮಾಜಿ ಮೇಯರ್ ಮತ್ತು ಹಾಲಿ ಕಾಪ್ರೋರೇಟರ್ ಆಗಿದ್ದ ರವಿಕುಮಾರ್ ಅಲಿಯಾಸ್ ಗಡ್ಡರವಿಯ ಕೊಲೆ ಆರೋಪದ ಮೇಲೆ ಸುಜಯ್ ಭಾರ್ಗವ್‍ನನ್ನು ಬಂಧಿಸಲಾಗಿದೆ.

ಆತ ಸದ್ಯಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಜೈಲಿನಿಂದಲೇ ತನ್ನ ಸಹಚರರಿಂದ ಹಫ್ತಾ ವಸೂಲಿ ಮಾಡಲು ಪ್ರಯತ್ನಿಸಿದ್ದಾನೆ. ಸುಜಯ್ ಭಾರ್ಗವ್‍ನ ಸಹಚರರು ಇತ್ತಿಚೆಗೆ ಮಧುಗಿರಿಯ ಉದ್ಯಮಿಯೊಬ್ಬರಿಗೆ ಹಫ್ತಾ ನೀಡುವಂತೆ ಧಮಕಿ ಹಾಕಿದ್ದರು.

ಕೊಡದೆ ಇದ್ದಾಗ ಹಲ್ಲೆ ನಡೆಸಿದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಕೋನವಂಶಿಕೃಷ್ಣ ಅವರು ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದರು. ನ್ಯಾಯಾಲಯದ ಅನುಮತಿ ಪಡೆದು ಪ್ರಮುಖ ಆರೋಪಿ ಸುಜಯ್ ಭಾರ್ಗವನನ್ನು ಕರೆ ತರಲಾಗಿತ್ತು.

ಸರ್ಕಾರದ ಸೂಚನೆಯಂತೆ ವಿಚಾರಣೆಗೂ ಮುನ್ನಾ ಪರೀಕ್ಷೆ ಒಳಪಡಿಸಿದಾಗ ಕೊರೊನಾ ಸೋಂಕಿರುವುದು ಖಚಿತವಾಗಿದೆ. ಹಾಗಾಗಿ ವಿಚಾರಣೆ ಮುಂದುವರೆಸಲಾಗದೆ ಆರೋಪಿಯನ್ನು ಮತ್ತೆ ಜೈಲಿಗೆ ಕಳುಹಿಸಲಾಗಿದೆ. ಆತನನ್ನು ಕರೆತಂದ ವಾಹನವನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಸಿಬ್ಬಂದಿ ಮತ್ತು ಅಧಿಕಾರಿಗಳು ಕೂಡ ಪರೀಕ್ಷೆಗೆ ಒಳಪಟ್ಟಿದ್ದಾರೆ.

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಸುಜಯ್ ಜೈಲಿನಲ್ಲಿದ್ದುಕೊಂಡೆ ಹವಾ ಕಾಯ್ದುಕೊಳ್ಳಲು ಹಫ್ತಾ ವಸೂಲಿಗೆ ಇಳಿದಿರುವುದು, ಜಿಲ್ಲೆ ಪೊಲೀಸರ ಕಾರ್ಯಕ್ಷಮತೆಯನ್ನು ಪ್ರಶ್ನಿಸಿದೆ.

Facebook Comments