ಒಂಟಿ ಮನೆಗೆ ನುಗ್ಗಿ ತಂದೆ ಹತ್ಯೆ, ಮಗನ ಮೇಲೆ ಮಾರಣಾಂತಿಕ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಡಿ.11- ಒಂಟಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿ ವಿಕಲಚೇತನ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಧುಗಿರಿ-ಗೌರಿಬಿದನೂರು ರಸ್ತೆಯ ಮರಬಳ್ಳಿ ಗೇಟ್‍ನಲ್ಲಿ ಒಂಟಿ ಮನೆಯಲ್ಲಿ ವಾಸವಾಗಿದ್ದ ಚೌಡಯ್ಯ (70) ಕೊಲೆಯಾದ ವ್ಯಕ್ತಿಯಾಗಿದ್ದು, ಇವರ ಮಗ ವಿಕಲಚೇತನ ಹನುಮಂತರಾಜು (35) ಗಂಭೀರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆಯಲ್ಲಿ ತಂದೆ-ಮಗ ಇಬ್ಬರೇ ಇದ್ದರು. ಜೀವನೋಪಾಯಕ್ಕಾಗಿ ಮನೆಗೆ ಹೊಂದಿಕೊಂಡಂತೆ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದರು. ಈ ಅಂಗಡಿಯಲ್ಲಿ ಅಕ್ರಮ ಮದ್ಯ ಸರಬರಾಜು ಮಾಡಲಾಗುತ್ತಿತ್ತು ಎನ್ನಲಾಗಿದೆ. ರಾತ್ರಿ ದುಷ್ಕರ್ಮಿಗಳು ಮದ್ಯ ಪಡೆದು ಹಣ ಕೊಡದೆ ಚೌಡಯ್ಯ ಅವರೊಂದಿಗೆ ವಾಗ್ವಾದ ನಡೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಅಲ್ಲದೆ, ತಮ್ಮನ್ನು ಗುರುತಿಸಬಹುದೆಂಬ ಉದ್ದೇಶದಿಂದ ವಿಕಲಚೇತನ ಹನುಮಂತರಾಜು ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸುದ್ದಿ ತಿಳಿದ ಸಬ್‍ಇನ್ಸ್‍ಪೆಕ್ಟರ್ ಕಾಂತರಾಜು, ಸರ್ಕಲ್ ಇನ್ಸ್‍ಪೆಕ್ಟರ್ ದಯಾನಂದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಸ್‍ಪಿ ಕೋನವಂಶಿಕೃಷ್ಣ, ಡಿವೈಎಸ್‍ಪಿ ಪ್ರವೀಣ್‍ಕುಮಾರ್ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತೆರಳಿ ಮೃತದೇಹವನ್ನು ಪರಿಶೀಲನೆ ನಡೆಸಿದ್ದಾರೆ.

ನಂತರ ಈ ಸಂಜೆ ಪತ್ರಿಕೆಯೊಂದಿಗೆ ಮಾತನಾಡಿದ ಎಸ್‍ಪಿ ಕೋನವಂಶಿಕೃಷ್ಣ, ಈ ಘಟನೆ ಗಮನಿಸಿದರೆ ಹಣಕ್ಕಾಗಿ ಕೊಲೆ ಮಾಡಿರುವ ಸಾಧ್ಯತೆ ಇದೆ. ಒಂದು ಮೂಲದ ಪ್ರಕಾರ, ಸ್ಥಳೀಯರು ಮಾಡಿರಬಹುದೆ ಅಥವಾ ಆಂಧ್ರದ ಗ್ಯಾಂಗ್ ಮಾಡಿರುವ ಅನುಮಾನ ವ್ಯಕ್ತವಾಗಿದೆ.

ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು, ಇವರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಶೀಘ್ರದಲ್ಲೇ ಅವರನ್ನು ಬಂಧಿಸುವುದಾಗಿ ಭರವಸೆ ನೀಡಿದರು.  ಸಬ್‍ಇನ್ಸ್‍ಪೆಕ್ಟರ್ ಕಾಂತರಾಜು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments