ತುಮಕೂರಿನಲ್ಲಿ ಝಳಪಿಸಿದ ಲಾಂಗು-ಮಚ್ಚು, ಯುವಕನ ಬರ್ಬರ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ನ.8-ನಗರದಲ್ಲಿ ಮತ್ತೆ ಮಚ್ಚು, ಲಾಂಗು ಝಳಪಿಸಿದ್ದು, ಮುಸ್ಸಂಜೆಯಲ್ಲೇ ಗುಂಪೊಂದು ಯುವಕನನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಳೇ ದ್ವೇಷದಿಂದ ಮಹಂತೇಶ್ ಎಂಬಾತನನ್ನು ದುಷ್ಕರ್ಮಿಗಳು ಕೊಲೆ ಮಾಡಲಾಗಿದ್ದು, ಈತನ ಜೊತೆಯಲ್ಲಿದ್ದ ಮಂಜುನಾಥ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ರೌಡಿಶೀಟರ್ ಲೋಹಿತ್‍ನ ಸಹಚರ ಚಿನ್ನು ಅಲಿಯಾಸ್ ಸುಹಾಸ್ ನಿನ್ನೆ ಸಂಜೆ ಮಹಂತೇಶ್ ಮತ್ತು ಮಂಜುನಾಥ್‍ನನ್ನು ಡ್ರಾಗನ್ ಹಿಡಿದು ಅಟ್ಟಾಡಿಸಿಕೊಂಡು ಬರುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ರೌಡಿಶೀಟರ್ ಲೋಹಿತ್ ಮತ್ತು ಕೊಲೆಯಾಗಿರುವ ಮಹಂತೇಶ್‍ನ ನಡುವೆ ಹಳೆ ದ್ವೇಷ ಇತ್ತು ಎನ್ನಲಾಗಿದೆ. ಮಹಂತೇಶ್‍ನನ್ನು ಕೊಲೆ ಮಾಡಲು ಲೋಹಿತ್ ಹೊಂಚು ಹಾಕಿದ್ದ.

ಈ ನಡುವೆ ಮೊನ್ನೆ ಪ್ರಕರಣವೊಂದರಲ್ಲಿ ಪೊಲೀಸರು ಲೋಹಿತ್‍ನನ್ನು ಬಂಧಿಸಿದ್ದರು. ತನ್ನ ಕಾರ್ಯಸಾಧನೆ ಆಗದಿದ್ದರಿಂದ ಲೋಹಿತ್ ತನ್ನ ಸಹಚರ ಚಿನ್ನು ಅಲಿಯಾಸ್ ಸುಹಾಸ್‍ಗೆ ಸುಫಾರಿ ಕೊಟ್ಟಿದ್ದನು ಎನ್ನಲಾಗಿದೆ.  ಅದರಂತೆ ನಿನ್ನೆ ಸಂಜೆ ಚಿನ್ನು ಅಂಡ್ ಗ್ಯಾಂಗ್ ಮಹಾಂತೇಶನ ಕೊಲೆಗೆ ಹೊಂಚು ಹಾಕುತ್ತಿತ್ತು. ಶಿರಾ ಗೇಟ್ ಬಳಿಯ ಶಾಲೆಯೊಂದರ ಮುಂಭಾಗ ಮಹಂತೇಶ್ ತನ್ನ ಸ್ನೇಹಿತ ಮಂಜುನಾಥ್‍ನೊಂದಿಗೆ ಮಾತನಾಡುತ್ತಾ ಹೋಗುತ್ತಿದ್ದಾಗ ಏಕಾಏಕಿ ಈ ಗ್ಯಾಂಗ್ ಮಚ್ಚು ಲಾಂಗ್‍ಗಳಿಂದ ದಾಳಿ ನಡೆಸಿದೆ.

ಏನಾಗುತ್ತಿದೆ ಎನ್ನುವಷ್ಟರಲ್ಲಿ ಮಹಂತೇಶ್‍ನನ್ನು ಅಟ್ಟಾಡಿಸಿಕೊಂಡು ಚಿನ್ನು ಮತ್ತಿತರರು ಲಾಂಗ್‍ಗಳಿಂದ ಮನಬಂದಂತೆ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ಮಂಜುನಾಥ್ ಮೇಲೂ ಸಹ ಹಲ್ಲೆ ನಡೆಸಿದ್ದು ಈತ ತಪ್ಪಿಸಿಕೊಂಡು ಓಡಿ ಪ್ರಾಣ ಉಳಿಸಿಕೊಂಡಿದ್ದಾನೆ.  ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಂತೇಶ್‍ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಮಂಜುನಾಥ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸುದ್ದಿ ತಿಳಿದ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರೋಪಿಗಳಿಗಾಗಿ ತೀವ್ರ ಶೋಧ ಕೈಗೊಂಡಿದ್ದಾರೆ.  ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ನ್ಯಾಯಾಧೀಶರು ವಾಸವಿರುವ ಕೂಗಳತೆಯ ದೂರದಲ್ಲಿಯೇ ಬರ್ಭರ ಹತ್ಯೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ತಂದಿದೆ.

Facebook Comments