ಪೊಲೀಸರ ಮೇಲೆ ಕಲ್ಲು ತೂರಿದ 14 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜು.11- ವೀಕೆಂಡ್ ಕಫ್ರ್ಯೂ ವೇಳೆ ನಡೆದಿದ್ದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಎಸ್. ಪುರ ಠಾಣೆ ಪೋಲಿಸರು 14 ಮಂದಿಯನ್ನು ಬಂಧಿಸಿದ್ದಾರೆ. ಘಟನೆ ವಿವರ: ಕಳೆದ ಜು.3ರಂದು ವೀಕೆಂಡ್ ಲಾಕ್‍ಡೌನ್ ಇದ್ದರೂ ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿ.ಕುನ್ನಾಲ ಗ್ರಾಮದಲ್ಲಿ ಬಾಬು ಖಾನ್ ಎಂಬುವರು ಅಂಗಡಿಯನ್ನು ತೆರೆದುಕೊಂಡು ವ್ಯಾಪಾರ ಮಾಡುತ್ತಿದ್ದರು.

ಈ ವೇಳೆ ಗಸ್ತಿನಲ್ಲಿದ್ದ ಡಿವೈಎಸ್ಪಿ ಕುಮಾರಪ್ಪ ಹಾಗೂ ಸಬ್ ಇನ್ಸ್‍ಪೆಕ್ಟರ್ ಸೋಮಶೇಖರ್ ಬಾಗಿಲು ಬಂದ್ ಮಾಡುವಂತೆ ಎಚ್ಚರಿಕೆ ನೀಡಿದ್ದರೂ ಸಹ ವ್ಯಾಪಾರ ಮುಂದುವರೆಸಿದ್ದರು. ನಂತರ ಸಬ್ ಇನ್ಸ್‍ಪೆಕ್ಟರ್ ಸೋಮಶೇಖರ್ ಅವರು ಅಂಗಡಿ ಮುಚ್ಚಿಸಲು ಹೋದಾಗ ಬಾಬು ಖಾನ್ ವಿನಾ ಕಾರಣ ಜಗಳ ತೆಗೆದಿದ್ದು , ನಂತರ ಆತನನ್ನು ಠಾಣೆಗೆ ಕರೆ ತಂದು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಲಾಗಿತ್ತು.

ಇಷ್ಟಕ್ಕೆ ಸುಮ್ಮನಾಗದ ಬಾಬು ಗುಂಪುಕಟ್ಟಿಕೊಂಡು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಜೀಪ್ ಮೇಲೆ ಕಲ್ಲು ತೂರಿದ್ದರು. ಈ ಸಂದರ್ಭದಲ್ಲಿ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಕುಮಾರಸ್ವಾಮಿ, ರಾಜು ಹಲವರಿಗೆ ಪೆಟ್ಟಾಗಿತ್ತು.

ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಆರೋಪಿಗಳನ್ನು ಬಂಧಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು 14 ಮಂದಿಯನ್ನು ಬಂಧಿಸಿ ವಿಚಾರಣೆ ತೀವ್ರಗೊಳಿಸಿದ್ದಾರೆ.

Facebook Comments