ಆರು ದರೋಡೆಕೋರರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಅ.22- ರಸ್ತೆಯಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 6 ಮಂದಿ ದರೋಡೆ ಕೋರರ ತಂಡವನ್ನು ಕ್ಯಾತಸಂದ್ರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯೋಗೇಶ್(28), ರಮಣ(24), ಬಸವರಾಜು(20), ವಿಜಿ(32), ಚೇತನ್(22) ಮತ್ತು ಸಿದ್ದು(23) ಬಂಧಿತರು.

ಬಂಧಿತರಿಂದ ಎರಡು ಚಿನ್ನದ ಸರಗಳು, ಒಂದು ಉಂಗುರ, ಕಾರು, ಮೂರು ಬೈಕ್ , ಮೂರು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ಒಂದು ದರೋಡೆ ಪ್ರಕರಣ ಸೇರಿ ನಾಲ್ಕು ಸುಲಿಗೆ ಪ್ರಕರಣಗಳು, ಎರಡು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ. ಕ್ಯಾತಸಂದ್ರ ವ್ಯಾಪ್ತಿಯ ದೇವರಾಯನದುರ್ಗದ ನಾಮದ ಚಿಲುಮೆ ರಸ್ತೆಯ ಸಿದ್ದಗಂಗಾ ಮಠದ ಕ್ರಾಸ್ ಸಮೀಪ 6 ಮಂದಿ ದರೋಡೆಕೋರರು ಕಾರು ಮತ್ತು ಬೈಕ್‍ಗಳನ್ನು ನಿಲ್ಲಿಸಿಕೊಂಡು ಮಾರಕಾಸ್ತ್ರಗಳನ್ನಿಟ್ಟುಕೊಂಡು ರಸ್ತೆಯಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ದರೋಡೆಗೆ ಹೊಂಚು ಹಾಕುತ್ತಿದ್ದರು.

ಕ್ಯಾತಸಂದ್ರ ಠಾಣೆ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆ ದಾಳಿ ಮಾಡಿ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಬೇಕರಿ ಕೆಲಸ, ಕಾರು ಚಾಲಕ ವೃತ್ತಿ, ಮೆಕಾನಿಕ್ ಕೆಲಸ, ಬಂಡೆ ಕೆಲಸ ಮಾಡಿಕೊಂಡಿದ್ದು, ಪ್ರವಾಸಿಗರೇ ಇವರ ಟಾರ್ಗೆಟ್ ಆಗಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.

Facebook Comments