ಮೂವತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳವು, ದಾಖಲಾಗದ ಪ್ರಕರಣ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜ.31- ಮೂವತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳುವಾದರೂ ಪ್ರಕರಣ ದಾಖಲಿಸಿಕೊಳ್ಳದೆ ಕರ್ತವ್ಯಲೋಪವೆಸಗಿದ ಪೊಲೀಸರ ವರ್ತನೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರ ಈ ಕರ್ತವ್ಯಲೋಪವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ ಇಡೀ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

ಏನಿದು ಪ್ರಕರಣ: ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಂತಿನಗರ-ಬನಶಂಕರಿ ಮುಖ್ಯರಸ್ತೆಯಲ್ಲಿರುವ ಚಿನ್ನಾಭರಣ ಮಳಿಗೆ ಮಾಲೀಕರಿಂದ ದುಷ್ಕರ್ಮಿಗಳು ಸುಮಾರು 30 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಕಳೆದ 16.11.2019ರಂದು ರಾತ್ರಿ 9 ಗಂಟೆ ಸಮಯದಲ್ಲಿ ಮಳಿಗೆ ಮಾಲೀಕ ನಾಗರಾಜ್ ಅವರು ಅಂಗಡಿಯಲ್ಲಿದ್ದ ಚಿನ್ನಾಭರಣಗಳನ್ನು ಮನೆಗೆ ಕೊಂಡೊಯ್ಯಲು ಪ್ಯಾಕ್ ಮಾಡಿ ಮಳಿಗೆಗೆ ಬೀಗ ಹಾಕಲು ಮುಂದಾದ ಸಂದರ್ಭದಲ್ಲಿ ಡಿಯೋ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಲಕ್ಷಾಂತರ ಮೌಲ್ಯದ ಚಿನ್ನಾಭರಣವಿದ್ದ ಚೀಲ ಕದ್ದೊಯ್ದಿದ್ದರು.

ತಕ್ಷಣ ನಾಗರಾಜ್ ಅವರು ಜಯನಗರ ಪೊಲೀಸ್ ಠಾಣೆಗೆ ತೆರಳಿ ಚಿನ್ನ ಕಳುವಾದ ಬಗ್ಗೆ ದೂರು ನೀಡಿದ್ದರು. ಆದರೆ, ಕರ್ತವ್ಯದಲ್ಲಿದ್ದ ಎಸ್‍ಐ ಮುತ್ತುರಾಜ್ ಅವರು ದೂರು ದಾಖಲಿಸುವುದು ಬೇಡ. ನಾನೇ ಕಳುವಾಗಿರುವ ಚಿನ್ನ ಹುಡುಕಿಕೊಡುತ್ತೇನೆ ಎಂದು ಭರವಸೆ ನೀಡಿ ವಾಪಸ್ ಕಳುಹಿಸಿದ್ದರು. ಲಕ್ಷಾಂತರ ಮೌಲ್ಯದ ಚಿನ್ನ ಕಳುವಾದರೂ ಎಸ್‍ಐ ದೂರು ದಾಖಲಿಸಿಕೊಳ್ಳದಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಆದರೆ, ಇತ್ತೀಚೆಗೆ ಚಿನ್ನ ಕದ್ದು ಪರಾರಿಯಾಗಿದ್ದ ಖದೀಮರು ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈ ಕುರಿತಂತೆ ಬೆಂಗಳೂರಿನ ಪೊಲೀಸರು ತುಮಕೂರು ಎಸ್‍ಪಿ ಕೋನವಂಶಿಕೃಷ್ಣ ಅವರಿಗೆ ಮಾಹಿತಿ ನೀಡಿದ್ದರು. ತುಮಕೂರಿನಲ್ಲಿ ಲಕ್ಷಾಂತರ ಮೌಲ್ಯ ಚಿನ್ನ ಕಳುವಾಗಿರುವ ಬಗ್ಗೆ ವಂಶಿಕೃಷ್ಣ ಅವರು ಡಿವೈಎಸ್‍ಪಿ ತಿಪ್ಪೆಸ್ವಾಮಿ ಹಾಗೂ ತಿಲಕ್‍ಪಾರ್ಕ್ ವೃತ್ತದ ಇನ್ಸ್‍ಪೆಕ್ಟರ್ ಪಾರ್ವತಮ್ಮ ಅವರ ಬಳಿ ವಿಚಾರಿಸಿದಾಗ ಅವರ ಬಳಿಯೂ ಯಾವುದೇ ಮಾಹಿತಿ ಇರಲಿಲ್ಲ.

30 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳುವಾಗಿದ್ದರೂ ಎಸ್‍ಐ ಮುತ್ತುರಾಜ್ ಅವರು ದೂರು ದಾಖಲಿಸಿಕೊಳ್ಳದೆ ಕರ್ತವ್ಯಲೋಪವೆಸಗಿರುವುದು ತಿಳಿಯುತ್ತಿದ್ದಂತೆ ಕೆಂಡಾಮಂಡಲರಾದ ಎಸ್‍ಪಿ ಅವರು ಇಡೀ ಪ್ರಕರಣ ಕುರಿತಂತೆ ತನಿಖೆ ನಡೆಸಿ ವರದಿ ನೀಡುವಂತೆ ಡಿವೈಎಸ್‍ಪಿ ತಿಪ್ಪೆಸ್ವಾಮಿ ಹಾಗೂ ಇನ್ಸ್‍ಪೆಕ್ಟರ್ ಪಾರ್ವತಮ್ಮ ಅವರಿಗೆ ಸೂಚನೆ ನೀಡಿದ್ದಾರೆ.

ಅದೇ ರೀತಿ ತುಮಕೂರು ನಗರದ ಬನಶಂಕರಿ ಬಳಿ ಪತ್ರಕರ್ತರೊಬ್ಬರ ಸಂಬಂಧಿಕರನ್ನು ಅಡ್ಡಗಟ್ಟಿ ಹಣ ಮತ್ತು ಮೊಬೈಲ್ ದರೋಡೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಜಯನಗರ ಪೊಲೀಸರು ಆರೋಪಿ ಬಳಿ ಇದ್ದ ಹಣ ಹಾಗೂ ಮೊಬೈಲ್ ವಾಪಸ್ ಪಡೆದು ಪ್ರಕರಣ ದಾಖಲಿಸದೆ ಆತನನ್ನು ಬಿಟ್ಟು ಕಳುಹಿಸಿದ್ದಾರೆ.

ಆದರೆ, ಹಣ ಮತ್ತು ಮೊಬೈಲ್ ಕಳುವಾಗಿರುವ ಬಗ್ಗೆ ದೂರು ನೀಡಿದ ವ್ಯಕ್ತಿಗೆ ಎನ್‍ಸಿ ನೀಡಿ ವಾಪಸ್ ಕಳುಹಿಸಿರುವುದು ಪತ್ತೆಯಾಗಿದೆ. ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಪೊಲೀಸರೇ ಕರ್ತವ್ಯಲೋಪವೆಸಗುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಮೇಲಧಿಕಾರಿಗಳು ಪೊಲೀಸರ ಈ ಧೋರಣೆಯನ್ನು ಬದಲಾಯಿಸಿಕೊಳ್ಳುವ ಬಗ್ಗೆ ಎಚ್ಚರಿಕೆ ನೀಡಬೇಕೆಂದು ಆಗ್ರಹಿಸಿದ್ದಾರೆ.

Facebook Comments