10 ಮಂದಿ ಡಕಾಯಿತರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ನ.3- ಹಗಲು ವೇಳೆಯೇ ಮನೆಯೊಂದಕ್ಕೆ ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ ದಂಪತಿಯನ್ನು ಬೆದರಿಸಿ ಹಣ ಹಾಗೂ ಚಿನ್ನಾಭರಣ ದೋಚಿದ್ದ ಹತ್ತು ಮಂದಿ ಡಕಾಯಿತರನ್ನು ಹೊಸಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಸ್ಥಳೀಯ ನಿವಾಸಿಗಳಾದ ರೋಹಿತ್(20), ಲೋಕೇಶ್(29), ಮನೋಜ್‍ಕುಮಾರ್(21), ರಾಘವೇಂದ್ರ(21), ವೆಂಕಟೇಶ್(20), ಭರತ್‍ಕುಮಾರ್(21), ಗಂಗಾಧರ್(21), ಪವನ್(24), ಸಂತೋಷ(20) ಮತ್ತು ಪವನ್‍ಕುಮಾರ್(21) ಬಂಧಿತ ದರೋಡೆಕೋರರು.

ಆರೋಪಿಗಳಿಂದ 2.90 ಲಕ್ಷ ರೂ. ಬೆಲೆಬಾಳುವ ಆಟೋರಿಕ್ಷಾ, ಬಜಾಜ್ ಅವೆಂಜರ್ ಬೈಕ್, ಏಪ್ರಿಲಿಯಾ ಬೈಕ್ ಹಾಗೂ 20 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ.  ಅಕ್ಟೋಬರ್ 20ರಂದು ಮಧ್ಯಾಹ್ನ 3.30ರ ಸುಮಾರಿನಲ್ಲಿ ಹೊಸಬಡಾವಣೆ ಠಾಣೆ ವ್ಯಾಪ್ತಿಯ ವಾಲ್ಮೀಕಿನಗರದ 6ನೇ ಕ್ರಾಸ್ ನಿವಾಸಿ ವಿಶ್ವೇಶ್ವರ ಆರಾಧ್ಯ ಎಂಬುವರ ಮನೆಗೆ ನುಗ್ಗಿದ ಡಕಾಯಿತರು ಆರಾಧ್ಯ ಮತ್ತು ಪತ್ನಿ ಪ್ರೇಮಕುಮಾರಿ ಅವರಿಗೆ ಮಚ್ಚು, ಚಾಕುವಿನಿಂದ ಬೆದರಿಸಿ 5.87 ಲಕ್ಷ ರೂ. ಬೆಲೆ ಬಾಳುವ 4 ಚಿನ್ನದ ಬಳೆಗಳು, 72 ಸಾವಿರ ಹಣ, ಎರಡು ಮೊಬೈಲ್ ದರೋಡೆ ಮಾಡಿ ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಹೊಸ ಬಡಾವಣೆ ಪೊಲೀಸರು ತನಿಖೆ ಕೈಗೊಂಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಪತ್ತೆಹಚ್ಚಲು ತಿಲಕ್‍ಪಾರ್ಕ್ ಸಿಪಿಐ ಮುನಿರಾಜು ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ 10 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ರೋಹಿತ ಎಂಬಾತನ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ.

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಉದ್ದೇಶ್, ಪೆÇಲೀಸ್ ಉಪಾಧೀಕ್ಷಕ ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ ತಿಲಕ್‍ಪಾರ್ಕ್ ಸಿಪಿಐ ಮುನಿರಾಜು, ತುಮಕೂರು ನಗರ ಸಿಪಿಐ ನವೀನ್ ನೇತೃತ್ವದಲ್ಲಿ ಎಎಸ್‍ಐ ಪರಮೇಶ್ ಹಾಗೂ ಸಿಬ್ಬಂದಿ ಒಳಗೊಂಡ ತಂಡವನ್ನು ಎಸ್‍ಪಿ ಕೋನವಂಶಿ ಕೃಷ್ಣ ಅಭಿನಂದಿಸಿದ್ದಾರೆ.

Facebook Comments