ಕಾರು ಸಹಿತ 10 ಲಕ್ಷ ದರೋಡೆ ಮಾಡಿದ್ದ ಮೂವರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಸೆ.27-ಮೆಡಿಕಲ್ ಸೀಟಿಗಾಗಿ 10 ಲಕ್ಷ ಹಣವನ್ನು ಕಾರಿನಲ್ಲಿಟ್ಟುಕೊಂಡು ಬೆಂಗಳೂರಿಗೆ ಬಂದಿದ್ದ ಸ್ನೇಹಿತರ ಜತೆಯಲ್ಲಿದ್ದುಕೊಂಡೇ ಹಣ ಹಾಗೂ ಕಾರನ್ನು ಸಿನಿಮೀಯ ರೀತಿ ದರೋಡೆ ಮಾಡಿದ್ದ ಮೂವರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ದಾದಾಫೀರ್, ಸಲೀಂ ಮತ್ತು ತಬರೇಜ್ ಬಂಧಿತ ಆರೋಪಿಗಳು. ಮಾರುತಿ ಶಿಫ್ಟ್ ಕಾರಿನಲ್ಲಿ ಕಳೆದ 22ರಂದು ಅರುಣ್‍ಕುಮಾರ್, ಕಿಶನ್ ಮತ್ತು ಅಬ್ರಾಹಂ ಸಲೀಂ ಜತೆಯಾಗಿ ಬೆಂಗಳೂರಿನಿಂದ 10 ಲಕ್ಷ ಹಣ ಇಟ್ಟುಕೊಂಡು ಮೆಡಿಕಲ್ ಸೀಟಿನ ಸಂಬಂಧ ತುಮಕೂರಿಗೆ ತೆರಳಿದ್ದರು.

ಈ ಸಂದರ್ಭದಲ್ಲಿ ಜತೆಯಲ್ಲಿದ್ದ ಸಲೀಂ ಹಣವನ್ನು ಲಪಟಾಯಿಸಲು ಸಂಚು ರೂಪಿಸಿದ್ದನು. ಅದರಂತೆ ಕಾರು ಅಂದು ನೆಲಮಂಗಲದ ಬಳಿ ಬಂದಾಗ ಮೂತ್ರ ವಿಸರ್ಜನೆಗೆಂದು ಕಾರಿನಿಂದ ಇಳಿದ ಸಲೀಂ ಸ್ವಲ್ಪ ದೂರ ಹೋಗಿ ತುಮಕೂರಿನಲ್ಲಿದ್ದ ಸಹಚರ ದಾದಾಫೀರ್‍ಗೆ ಕರೆ ಮಾಡಿ ನಾವು ತುಮಕೂರಿಗೆ ಬರುತ್ತಿದ್ದೇವೆ. ಕಾಫಿ ಕುಡಿಯಲು ಹೋಗುವ ಸಂದರ್ಭದಲ್ಲಿ ಕಾರು ನಿಲ್ಲಿಸಿದ ಸ್ಥಳಕ್ಕೆ ಬಂದು ಕಾರು ಹಾಗೂ ಹಣವನ್ನು ಅಪಹರಿಸು ಎಂದು ಹೇಳಿದ್ದಾನೆ.

ಅದರಂತೆ ಅಂದು ಸಂಜೆ ತಿಲಕ್‍ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರು ನಿಲ್ಲಿಸಿ ಕಾಫಿಗೆ ತೆರಳಿದ್ದಾಗ ಸಲೀಂನ ಸಂಚಿನಂತೆ ದಾದಾಫೀರ್ ಸ್ಥಳಕ್ಕೆ ತೆರಳಿ ಕಾರು ಹಾಗೂ ಹಣವನ್ನು ಅಪಹರಿಸಿ ಪರಾರಿಯಾಗಿದ್ದನು. ಈ ಬಗ್ಗೆ ಅರುಣ್‍ಕುಮಾರ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್‍ಪಿ ಕೋನವಂಶಿಕೃಷ್ಣ ಅವರು ದರೋಡೆಕೋರರ ಪತ್ತೆಗಾಗಿ ಡಿವೈಎಸ್‍ಪಿ ತಿಪ್ಪೆಸ್ವಾಮಿ ನೇತೃತ್ವದಲ್ಲಿ ರಾಮನಗರದಿಂದ ಒಂದು ವಾರದ ಹಿಂದಷ್ಟೇ ತುಮಕೂರಿಗೆ ವರ್ಗಾವಣೆಯಾಗಿರುವ ನಗರ ಠಾಣೆ ಇನ್ಸ್‍ಪೆಕ್ಟರ್ ನವೀನ್ ಹಾಗೂ ಪ್ರಸನ್ನ, ರಾಮಚಂದ್ರ, ಮಂಜುನಾಥ್, ಸಿದ್ದು ಅವರನ್ನೊಳಗೊಂಡ ತಂಡವನ್ನು ರಚಿಸಿದ್ದರು.

ಈ ತಂಡ ಕಾರ್ಯಾಚರಣೆ ನಡೆಸಿ ಅರುಣ್‍ಕುಮಾರ್ ಅವರ ಜತೆಯಲ್ಲಿದ್ದ ಸಲೀಂನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ತಾನೇ ಸಂಚು ರೂಪಿಸಿದ್ದಾಗಿ, ಇದಕ್ಕೆ ಬೆಂಗಳೂರಿನ ತಬರೇಜ್ ಮತ್ತು ತುಮಕೂರಿನ ದಾದಾಫೀರ್‍ನನ್ನು ಬಳಸಿಕೊಂಡಿದ್ದಾಗಿ ಬಾಯ್ಬಿಟ್ಟಿದ್ದಾನೆ.  ಈತನ ಹೇಳಿಕೆ ಆಧರಿಸಿ ದಾದಾಫೀರ್, ತಬರೇಜ್ ಮತ್ತು ಸಲೀಂನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments