ಡ್ರಗ್ಸ್ ಕಿಕ್ ನಲ್ಲಿ ತೇಲಾಡುತ್ತಿದೆ ತುಮಕೂರು..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಫೆ.29- ರಾಜಧಾನಿ ಬೆಂಗಳೂರನ್ನು ಕಂಗೆಡಿಸಿದ್ದ ಡ್ರಗ್ಸ್ ಮಾಫಿಯಾ ಇದೀಗ ಕಲ್ಪತರು ನಾಡಿನ ಮೂಲಕ ಗುಬ್ಬಿ ತಾಲ್ಲೂಕಿಗೂ ಕಾಲಿಟ್ಟಿರುವುದು ಜನತೆಯನ್ನು ಕಂಗೆಡಿಸಿದೆ.  ಗುಬ್ಬಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಶೌಚಾಲಯದ ಸಮೀಪ ಪ್ರತಿ ನಿತ್ಯ 25ಕ್ಕೂ ಹೆಚ್ಚು ಡ್ರಗ್ಸ್ ಸೇವಿಸುವ ಸಿರಂಜ್‍ಗಳು ರಕ್ತಲೇಪಿತವಾದ ಪತ್ತೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಸಿರಂಜ್ ಮೂಲಕ ಡ್ರಗ್ಸ್ ಸೇವಿಸಿ ಚುಚ್ಚುಮದ್ದುಗಳನ್ನು ಶೌಚಾಲಯದಲ್ಲಿ ಬಿಸಾಡಿ ಹೋಗುತ್ತಿರುವುದರಿಂದ ನಮಗೆ ಶೌಚಾಲಯ ಶುಚಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಲ್ಲಿನ ಸಿಬ್ಬಂದಿಗಳು ಅಲವತ್ತುಕೊಂಡಿದ್ದಾರೆ.  ಗುಬ್ಬಿ ತಾಲ್ಲೂಕಿನ ಸುತ್ತಮುತ್ತ ಇರುವ ಪ್ರತಿಷ್ಟಿತ ಕಾಲೇಜುಗಳಿಗೆ ಡ್ರಗ್ಸ್ ಸರಬರಾಜಾಗುತ್ತಿದ್ದು , ಡ್ರಗ್ಸ್ ವ್ಯಸನಿಗಳು ಇಲ್ಲಿಗೆ ಬಂದು ಯಾರಿಗೂ ಕಾಣದಂತೆ ಸಿರಂಜ್ ಮೂಲಕ ನಮ್ಮ ದೇಹಕ್ಕೆ ಮಾದಕ ವಸ್ತು ಇಂಜೆಕ್ಟ್ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಜಾಲಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಗುಬ್ಬಿ ತಾಲ್ಲೂಕಿನಲ್ಲಿ ಡ್ರಗ್ಸ್ ಜಾಲ ಬೀಡು ಬಿಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ ಅವರು ಸ್ಥಳೀಯ ಪೊಲೀಸರಿಗೆ ಮಾಫಿಯಾವನ್ನು ಕೊನೆಗಾಣಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪಾವಗಡ, ಶಿರಾ, ಗುಬ್ಬಿ, ಕುಣಿಗಲï, ತಿಪಟೂರು, ಚಿಕ್ಕನಾಯಕನಹಳ್ಳಿ, ತಾಲ್ಲೂಕುಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಗಾಂಜ ಮಾರಾಟ ಮಾಡುತ್ತಿದ್ದು ಮಾಲು ಸಮೇತ ಸಿಕ್ಕಿ ಬಿದ್ದಿದ್ದಾರೆ. ಇದೀಗ ಗುಬ್ಬಿಯಲ್ಲೂ ಡ್ರಗ್ಸ್ ಮಾಫಿಯಾ ಬೀಡು ಬಿಟ್ಟಿರುವುದು ಇಡೀ ಜಿಲ್ಲೆಯಲ್ಲೇ ಡ್ರಗ್ಸ್ ಮಾಫಿಯಾ ಕೇಂದ್ರವಾಗಿ ಪರಿವರ್ತನೆಗೊಂಡಿದೆ.

ತುಮಕೂರಿಗೆ ನೆರೆಯ ಆಂಧ್ರದಿಂದ ಗಾಂಜಾ ಮತ್ತಿತರ ಮಾದಕ ದ್ರವ್ಯಗಳು ಸರಬರಾಜಾಗುತ್ತಿದ್ದು , ಈ ಮಾಫಿಯಾ ಜತೆಗೆ ಕೆಲ ಪೊಲೀಸರು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಅದೇ ರೀತಿ ರಾಜಸ್ತಾನ ಮತ್ತಿತರ ಉತ್ತರ ಭಾಗದಿಂದ ಅಫೀಮಿನಂತಹ ಮಾದಕ ದ್ರವ್ಯವೂ ಕಲ್ಪತರು ನಾಡಿಗೆ ಸರಬರಾಜಾಗುತ್ತಿದೆ. ಗುಲ್ಕನ್ ಬಾಕ್ಸ್‍ನಲ್ಲಿ ಅಫೀಮನ್ನು ಸರಬರಾಜು ಮಾಡಲಾಗುತ್ತಿದ್ದು , ವಿದ್ಯಾರ್ಥಿಗಳು ಮಾದಕ ದ್ರವ್ಯದ ಚಟಕ್ಕೆ ಬಲಿಯಾಗುತ್ತಿದ್ದರೂ ಪೊಲೀಸ್ ಇಲಾಖೆಗೆ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಒಟ್ಟಾರೆ ತುಮಕೂರು ಜಿಲ್ಲಾಯಲ್ಲಿ ದಿನೇ ದಿನೇ ಗಾಂಜಾ, ಅಫೀಮು, ನಿಷೇತ ಗನ್‍ಗಳು, ಮಟ್ಕಾಗಳು, ಜೂಜು ಅಡ್ಡೆಗಳು ಎಲ್ಲಾ ಮೀರಿ ನಡೆಯುತ್ತಿರುವುದರಿಂದ ಇಡೀ ತುಮಕೂರು ಡ್ರಗ್ಸ್ ಮಾಫಿಯಾ ಸಿಟಿಯಾಗಿ ಪರಿವರ್ತನೆಗೊಳ್ಳುತ್ತಿದೆ.  ಇನ್ನು ಮುಂದಾದರೂ ಪೊಲೀಸರು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಇಂತಹ ಮಾಫಿಯಾಕ್ಕೆ ಕಡಿವಾಣ ಹಾಕಿ ಭವ್ಯ ಭಾರತದ ಪ್ರಜೆಗಳಾಗಲಿರುವ ವಿದ್ಯಾರ್ಥಿ ಸಮುದಾಯವನ್ನು ಡ್ರಗ್ಸ್ ಮಾಫಿಯಾದಿಂದ ಕಾಪಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Facebook Comments