ಟರ್ಕಿ, ಗ್ರೀಸ್‍ನಲ್ಲಿ ಪ್ರಬಲ ಭೂಕಂಪ, ಮಿನಿ ಸುನಾಮಿ : 30ಕ್ಕೂ ಹೆಚ್ಚು ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ತಾನ್‍ಬುಲ್, ಅ.31-ಟರ್ಕಿ ಮತ್ತು ಗ್ರೀಸ್‍ನಲ್ಲಿ ನಿನ್ನೆ ಸಂಭವಿಸಿದ ಮಿನಿ ಸುನಾಮಿ ಮತ್ತು ಪ್ರಬಲ ಭೂಕಂಪದಲ್ಲಿ ಈವರೆಗೆ 30ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ವಿನಾಶಕಾರಿ ಭೂಕಂಪದಲ್ಲಿ ಉರುಳಿ ಬಿದ್ದ ಕಟ್ಟಡಗಳ ಆವಶೇಷಗಳಡಿ ಅನೇಕರು ಸಿಲುಕಿರುವ ಸಾಧ್ಯತೆಗಳಿದ್ದು, ಇನ್ನೂ ಕೆಲವರು ಕಣ್ಮರೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಟರ್ಕಿಯ ಅನೇಕ ಕಡೆ ಮತ್ತು ಗ್ರೀಸ್‍ನ ಕೆಲವು ಭಾಗಗಳಲ್ಲಿ ಭೂಕಂಪದಿಂದಾಗಿ ಅನೇಕ ಕಟ್ಟಡಗಳು ಕುಸಿದು ಬಿದ್ದಿವೆ. ಮಿನಿ ಸುನಾಮಿಯಿಂದಾಗಿ ಕೆಲವು ಪ್ರದೇಶಗಿಳಿಗೆ ನೀರು ನುಗ್ಗಿದ್ದು ಜಲಾವೃತವಾಗಿವೆ.  ಸುನಾಮಿ ಮತ್ತು ಆನಂತರದ ಭೂಕಂಪದಿಂದಾಗಿ ಟರ್ಕಿ ಮತ್ತು ಗ್ರೀಸ್ ಜನರು ಹೆದರಿ ಕಂಗಲಾಗಿದ್ದು ಮತ್ತೆ ಮತ್ತೆ ಭೂಮಿ ಕಂಪಿಸುತ್ತಿರುವುದರಿಂದ ಮತ್ತಷ್ಟು ಭಯಭೀತರಾಗಿದ್ದಾರೆ.

ಏಜೀಸ್ ಸಮುದ್ರದ ಸಮೋಸ್ ದ್ವೀಪದ ಸಾಗರ ಪ್ರದೇಶದಲ್ಲಿ ಮಿನಿ ಸುನಾಮಿಯಿಂದಾಗಿ ಟರ್ಕಿ ಮತ್ತು ಗ್ರೀಸ್ ದೇಶಗಳ ಕರಾವಳಿ ಪ್ರದೇಶಗಳಲ್ಲಿ ರಿಕ್ಟರ್ ಮಾಪಕದಲ್ಲಿ 7ರಷ್ಟು ತೀವ್ರತೆಯ ಭೂಕಂಪ ಬಂದಪ್ಪಳಿಸಿತು.  ಏಜೀಯನ್ ರೆಸಾರ್ಟ್ ನಗರಿ ಇಜ್ಮೀರ್‍ನಲ್ಲಿ ಭೂಕಂಪದಿಂದಾಗಿ ಭಾರೀ ಸಾವು-ನೋವು ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ 22ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಅನೇಕರು ಗಾಯಗೊಂಡಿದ್ದಾರೆ.

ಮಿನಿ ಸುನಾಮಿಯಿಂದಾಗಿ ಸಮುದ್ರ ಉಕ್ಕಿ ನೀರು ನಗರದ ಕೆಲವು ಭಾಗಗಳಿಗೆ ನುಗ್ಗಿ ಜಲಾವೃತವಾಗಿದೆ. ಮಿನಿ ಸುನಾಮಿ ಮತ್ತು ಪ್ರಬಲ ಭೂಕಂಪದಿಂದಾಗಿ ಟರ್ಕಿಯ ಪಶ್ಚಿಮ ಕರಾವಳಿ ಪ್ರದೇಶಕ್ಕೆ ತೀವ್ರ ಧಕ್ಕೆಯಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ಕಟ್ಟಡಗಳು ಮತ್ತು ಮನೆಗಳು ಉರುಳಿ ಬಿದ್ದಿದ್ದು, ಲೆಕ್ಕವಿಲ್ಲದಷ್ಟು ವಸತಿ ಸಂಕಿರ್ಣಗಳಿಗೆ ಹಾನಿಯಾಗಿದೆ.
ಟರ್ಕಿಯ ಇಸ್ತಾನ್‍ಬುಲ್ ಮತ್ತು ಗ್ರೀಸ್ ರಾಜಧಾನಿ ಅಥೆನ್ಸ್ ನಗರಗಳಲ್ಲೂ ಭೂಕಂಪದ ಅನುಭವವಾಗಿದೆ.

ಭೂಕಂಪದ ನಂತರ ಸುಮಾರು 200 ಬಾರಿ ಭೂಮಿ ಕಂಪಿಸಿದ್ದರಿಂದ ಟರ್ಕಿ ಮತ್ತು ಗ್ರೀಸ್ ಜನರು ಭಯಭೀತರಾಗಿದ್ದಾರೆ.  ಅಮೆರಿಕದ ಭೂಗರ್ಭ ಸಮೀಕ್ಷಾ ಕೇಂದ್ರದ ಪ್ರಕಾರ, ರಿಕ್ಟರ್ ಮಾಪಕದಲ್ಲಿ 7ರಷ್ಟು ತೀವ್ರತೆಯ ಭೂಕಂಪ ದಾಖಲಾಗಿದೆ. ಸಮೋಸ್ ದ್ವೀಪದ ಟರ್ಕಿ ಮತ್ತು ಗ್ರೀಸ್ ಕರಾವಳಿ ಪ್ರದೇಶಗಳಿಗೆ ಪ್ರಕೃತಿ ವಿಕೋಪದಿಂದ ತೀವ್ರ ಹಾನಿಯಾಗಿದೆ. ಗ್ರೀಸ್‍ನ ಕಾರ್ಲೋವಾಸಿ ದ್ವೀಪದಲ್ಲಿ ಸಾವು-ನೋವು ಸಂಭವಿಸಿದ್ದು, ಕೆಲವರು ಕಣ್ಮರೆಯಾಗಿದ್ದಾರೆ.

ಮಿನಿ ಸುನಾಮಿ ಮತ್ತು ಭೂಕಂಪದಿಂದಾಗಿ ಪ್ರಬಲ ವೈರಿ ದೇಶಗಳಾದ ಟರ್ಕಿ ಮತ್ತು ಗ್ರೀಸ್ ತತ್ತರಿಸಿದ್ದು, ಅಪರೂಪದ ವಿದ್ಯಮಾನವೊಂದರಲ್ಲಿ ಗ್ರೀಸ್ ಪ್ರಧಾನಮಂತ್ರಿ ಕಿರಿಯಾಕೋಸ್ ಮಿಟ್ಸೊಟಕಿಸ್ ಅವರು ಟರ್ಕಿ ಅಧ್ಯಕ್ಷ ರೆಸಿಪ್ ಟಯ್ಯಪ್ ಎರ್ಡೊಗಾನ್ ಅವರು ದೂರವಾಣಿ ಕರೆ ಮಾಡಿ ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೃತರಿಗೆ ಸಂತಾಪ ಸೂಚಿಸಿ ಅಗತ್ಯವಾದ ಎಲ್ಲ ನೆರವು ಮತ್ತು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ರಸ್ತೆಗೆ ಬಂದ ರೋಗಿಗಳು : ಕರಾವಳಿ ನಗರಿ ಇಜ್ಮೀರ್‍ನ ಬಹುತೇಕ ಪ್ರದೇಶಗಳು ವಿನಾಶಕಾರಿ ಭೂಕಂಪದಿಂದಾಗಿ ಹಾನಿಗೀಡಾಗಿವೆ. ಈ ಪಟ್ಟಣದಲ್ಲಿ 30 ಲಕ್ಷ ಜನರಿದ್ದು, ಭೂಕಂಪ ಸಂಭವಿಸುತ್ತಿದ್ದಂತೆ ಅನೇಕರು ಕಟ್ಟಡಗಳಿಂದ ಹೊರಗೆ ಓಡಿ ಬಂದರು.  ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಸಹ ಹೆದರಿ ಕಂಗಲಾಗಿ ರಸ್ತೆಗಳತ್ತ ಧಾವಿಸಿದರು.

ಈ ಎರಡೂ ದೇಶಗಳ ಭೂಕಂಪ ಪೀಡಿತ ಪ್ರದೇಶಗಳಲ್ಲಿ ರಕ್ಷಣೆ ಮತ್ತು ಪರಿಹಾರ ಸಮರೋಪಾದಿಯಲ್ಲಿ ಸಾಗಿದೆ. 1999ರಲ್ಲಿ ಟರ್ಕಿ ರಾಜಧಾನಿ ಇಸ್ತಾನ್‍ಬುಲ್ ಸೇರಿದಂತೆ ವಿವಿಧೆಡೆ ಸಂಭವಿಸಿದ 7.4ರಷ್ಟು ತೀವ್ರತೆಯ ಭೂಕಂಪದಲ್ಲಿ 17,000ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿ, ಸಹಸ್ರಾರು ಮಂದಿ ಗಾಯಗೊಂಡಿದ್ದರು.

 

Facebook Comments