ಐಸಿಸ್ ಉಗ್ರರ ನಿಗ್ರಹಕ್ಕೆ ಸಿರಿಯಾ ಮೇಲೆ ಶೀಘ್ರದಲ್ಲೇ ಟರ್ಕಿ ದಾಳಿ
ವಾಷಿಂಗ್ಟನ್/ಇಸ್ತಾನ್ಬುಲ್, ಅ.7- ಜಗತ್ತಿನ ಅತ್ಯಂತ ನಿರ್ದಯಿ ಮತ್ತು ಕ್ರೂರ ಉಗ್ರಗಾಮಿ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್ಐಎಸ್) ಭಯೋತ್ಪಾದಕರ ನಿಗ್ರಹಕ್ಕಾಗಿ ಉತ್ತರ ಸಿರಿಯಾ ಮೇಲೆ ಶೀಘ್ರವೇ ಟರ್ಕಿ ಸೇನಾ ಪಡೆಗಳು ದಾಳಿ ನಡೆಸಲಿವೆ.
ವಾಷಿಂಗ್ಟನ್ನಲ್ಲಿ ಇಂದು ಈ ವಿಷಯ ತಿಳಿಸಿದ ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಸ್ಟಿಫಾನಿ ಕ್ರಿಶ್ಶಿಯನ್ ಟರ್ಕಿ ನಡೆಸುವ ಈ ಕಾರ್ಯಾಚರಣೆಯಲ್ಲಿ ಅಮೆರಿಕ ಸೇನಾ ಪಡೆಗಳು ಭಾಗವಹಿಸುವುದಿಲ್ಲ. ಅಥವಾ ಸಹಕಾರ ನೀಡುವುದಿಲ್ಲ.
ಟರ್ಕಿ ಸೇನಾ ಪಡೆ ಮತ್ತು ಕುರ್ದಿಶ್ ಹೋರಾಟಗಾರರ ಜಂಟಿ ಸೇನೆ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.ಸಿರಿಯಾ ಮೇಲೆ ಪ್ರಾಬಲ್ಯ ಹೊಂದಿದ್ದ ಉಗ್ರರನ್ನು ಸುದೀರ್ಘ ಕಾರ್ಯಾಚರಣೆ ನಂತರ ದೇಶದ ದಕ್ಷಿಣ ಭಾಗದಿಂದ ಹೊಡೆದು ಓಡಿಸಲಾಗಿದೆ. ಉತ್ತರ ಭಾಗದಲ್ಲಿ ಐಸಿಸ್ ಉಗ್ರರ ಪ್ರಾಬಲ ಮುಂದುವರೆದಿದೆ.
ಈ ಹಿಂದೆ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಸದೆಬಡಿಯಲು ಅಮೆರಿಕ ಸೇನಾ ಪಡೆ ನೆರವು ನೀಡಿತ್ತು. ಆದರೆ ಈ ಜಂಟಿ ಕಾರ್ಯಾಚರಣೆಗೆ ನೆರವಾಗಿದ್ದ ಕುರ್ದಿಶ್ ಬಂಡುಕೋರರು ಮತ್ತು ಅಮೆರಿಕಾ ಸೇನೆ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು.
ಈ ಹಿನ್ನೆಲೆಯಲ್ಲಿ ಟರ್ಕಿ ಸದ್ಯದಲ್ಲೇ ನಡೆಸುವ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಅಮೆರಿಕ ಪಾಲ್ಗೊಳ್ಳುವುದಿಲ್ಲ. ಆದರೆ ಉತ್ತರ ಸಿರಿಯಾ ಮೇಲೆ ಟರ್ಕಿ ಸೇನಾ ಪಡೆ ನಡೆಸುವ ದಾಳಿಯನ್ನು ಸ್ವಾಗತಿಸುವುದಾಗಿ ಕ್ರಿಶ್ಶಿಯನ್ ತಿಳಿಸಿದ್ದಾರೆ.