ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳಿಗಾಗಿ 25 ಮಹಡಿಗಳ ಟ್ವಿನ್ ಟವರ್ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಆ. 27- ಬೆಂಗಳೂರು ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಆನಂದ್ ರಾವ್ ಸರ್ಕಲ್ ಬಳಿ 25 ಮಹಡಿಗಳ ಟ್ವಿನ್ ಟವರ್ ನಿರ್ಮಿಸಲು ಪ್ರಸ್ತಾವನೆಯನ್ನು ಸಿದ್ದಪಡಿಪಡಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

ವಿಧಾನಸೌಧದಲ್ಲಿ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಈ ಪ್ರಸ್ತಾವನೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ಚರ್ಚಿಸಿದ ಅವರು, ರಾಷ್ಟ್ರೀಯ ಕಟ್ಟಡ ನಿರ್ಮಾಣ ನಿಗಮ(ಎನ್‍ಬಿಸಿಸಿ)ವು ಪ್ರಸ್ತಾವನೆಯನ್ನು ಸಿದ್ದಪಡಿಸಿದೆ.

ಎನ್ ಬಿಸಿಸಿಯು ಡಿಪಿಎಆರ್ ಅನ್ನು ಸಿದ್ದಪಡಿಸಲಿದೆ. ಪ್ರಸ್ತುತವಾಗಿ ಸಿದ್ದಪಡಿಸಿರುವ ಪ್ರಸ್ತಾವನೆಯು ಎಫ್ ಎ ಆರ್ 2.5 ಅನುಪಾತದಲ್ಲಿದೆ. ಆ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಗಳು ಎಫ್ ಎ ಆರ್ 4.0 ಅನುಪಾತದಲ್ಲಿರುವುದರಿಂದ ಅದೇ ಮಾದರಿಯಲ್ಲಿ ಟ್ವಿನ್ ಟವರ್ ಅನ್ನು ನಿರ್ಮಿಸಬೇಕಿದೆ.

ಈ ಪ್ರಸ್ತಾವನೆಯನ್ನು ಎಫ್‍ಎ ಆರ್ 4.0 ಅನುಪಾತದೊಂದಿಗೆ ಮರುವಿನ್ಯಾಸಗಳಿಸುವಂತೆ ಸೂಚಿಸಿದರು. ಒಡಂಬಡಿಕೆ ಕರಡು ಪ್ರತಿಯನ್ನು ಸಿದ್ದಪಡಿಸಿ ಆರ್ಥಿಕ ಇಲಾಖೆ ಹಾಗೂ ಕಾನೂನು ಇಲಾಖೆಯ ಸಹಮತಿಯೊಂದಿಗೆ ಅನುಮೋದನೆ ಪಡೆಯಬೇಕು.

ಈ ಪ್ರಸ್ತಾವನೆಯ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸಲು ಮುಂದಿನ 15 ದಿನಗಳೊಳಗೆ ಸಚಿವ ಸಂಪುಟದ ಅನುಮೋದನೆ ಪಡೆಯಲು ಕ್ರಮಕೈಗೊಳ್ಳಬೇಕು. ಒಡಂಬಡಿಕೆಯ ಕರಡನ್ನು ಸಚಿವ ಸಂಪುಟದ ಅನುಮೋದನೆ ಪಡೆಯುವಂತೆ ಕ್ರಮಕೈಗೊಳ್ಳಬೇಕು.

ಈ ಟ್ವಿನ್ ಟವರ್ ನಿರ್ಮಾಣದಿಂದ ಬಾಡಿಗೆ ಕಟ್ಟಡಗಳಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳು ಒಂದೇ ಸೂರಿನಡಿ ಬರಲಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಹಕಾರಿಯಾಗಲಿದೆ. ಇದರಿಂದ ಸಾರ್ವಜನಿಕರು ಸುಲಲಿತವಾಗಿ ಏಕಕಾಲದಲ್ಲೇ ತಮಗೆ ಅಗತ್ಯವಿರುವ ಕಚೇರಿಗಳಿಗೆ ಭೇಟಿಯಾಗಿ ಸೇವೆಯನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

ಎನ್‍ಬಿಸಿಸಿಯ ಡಿಜಿಎಂ ವೇಣುಗೋಪಾಲ್ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಗುರುಪ್ರಸಾದ್ ಪ್ರಸ್ತಾವನೆ ಕುರಿತು ವಿಸ್ತ್ರತವಾಗಿ ವಿವರಿಸಿದರು.

ಸಭೆಯಲ್ಲಿ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯ ಅಭಿಯಂತರರಾದ ಶಿವಯೋಗಿ ಹಿರೇಮಠ, ಕಾರ್ಯನಿರ್ವಾಹಕ ಅಭಿಯಂತರರಾದ ಬಿ.ಪಿ.ಕುಮಾರ್, ಉಪಕಾರ್ಯದರ್ಶಿ ವಿಜಯ ಕುಮಾರಿ, ಡಿಸಿಎಂ ಆಪ್ತಕಾರ್ಯದರ್ಶಿ ವಿ.ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin