ಇಬ್ಬರ ಬಂಧನ : 9.50 ಲಕ್ಷ ಮೌಲ್ಯದ ವಾಹನಗಳು, ಮೊಬೈಲ್‍ಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಕಳ್ಳತನ ಮಾಡಿದ್ದ ದ್ವಿಚಕ್ರ ವಾಹನವನ್ನು ಬಳಸಿಕೊಂಡು ಜಾಲಿರೇಡ್ ಮಾಡುತ್ತಾ ಒಂಟಿಯಾಗಿ ಮೊಬೈಲ್‍ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದವರಿಂದ ಮೊಬೈಲ್‍ಗಳನ್ನು ಅಪಹರಿಸುತ್ತಿದ್ದ ಇಬ್ಬರನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿ 9.50 ಲಕ್ಷ ರೂ. ಬೆಲೆ ಬಾಳುವ ದ್ವಿಚಕ್ರ ವಾಹನಗಳು ಹಾಗೂ 22 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಉತ್ತರಹಳ್ಳಿಯ ಕೌಶಿಕ್ ಮತ್ತು ರಾಹುಲ್ ಬಂಧಿತ ಆರೋಪಿಗಳು. ಇವರಿಂದ ರಾಜರಾಜೇಶ್ವರಿನಗರ, ಬ್ಯಾಟರಾಯನಪುರ, ಹಾರೋಹಳ್ಳಿ, ಸಂಜಯ್‍ನಗರ, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಳವು ಮಾಡಿದ್ದ 6 ದ್ವಿಚಕ್ರ ವಾಹನಗಳು ಹಾಗೂ 22 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸೆಪ್ಟೆಂಬರ್ 6ರಂದು ರಾಜರಾಜೇಶ್ವರಿನಗರದ ಬಿಇಎಂಎಲ್, 3ನೇ ಹಂತ, ಗಿರಿಧಾಮ ಲೇಔಟ್‍ನ ಮನೆ ಮುಂಭಾಗ ನಿಲ್ಲಿಸಿದ್ದ 20 ಸಾವಿರ ಬೆಲೆ ಬಾಳುವ ದ್ವಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದ ಬಗ್ಗೆ ರಾಜರಾಜೇಶ್ವರಿನಗರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಇನ್ಸ್‍ಫೆಕ್ಟರ್ ಶಿವಣ್ಣ ಹಾಗೂ ಸಿಬ್ಬಂದಿ ತನಿಖೆ ನಡೆಸಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಮನೆಗಳ ಮುಂದೆ ನಿಲ್ಲಿಸಿದ್ದಂತಹ ಬೈಕ್‍ಗಳನ್ನು ಕಳವು ಮಾಡಿ ಅದೇ ವಾಹನವನ್ನು ಬಳಸಿಕೊಂಡು ಜಾಲಿರೇಡ್ ಮಾಡುತ್ತಾ ಮೊಬೈಲ್‍ಗಳನ್ನು ಅಪಹರಿಸುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments