ಪೊಲೀಸರೆದುರು ದರೋಡೆ ಕಥೆಕಟ್ಟಿ 7.5 ಲಕ್ಷ ಹಣ ಲಪಾಟಿಯಿಸಿದ್ದ ಆಸಾಮಿಗಳು ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜು.22- ಪೊಲೀಸರಿಗೆ ಕಥೆ ಕಟ್ಟಿ ಹಣ ದರೋಡೆ ಅಗಿದೆ ಎಂದು ಕಥೆ ಕಟ್ಟಿ 7.53 ಲಕ್ಷ ರೂ.ಗಳನ್ನು ಲಪಾಟಿಯಿಸಿದ್ದ ಕೋಟಕ್ ಮಹೇಂದ್ರ ಬ್ಯಾಂಕ್‍ನ ರಿಕವರಿ ಎಕ್ಸಿಕ್ಯುಟಿವ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ನಟರಾಜು.ಸಿ (31), 2) ಅಶೋ.ಬಿ.ಹೆಚ್ (32) ಬಂಧಿತ ಆರೋಪಿಗಳು.ಜು.15ರಂದು ರಾತ್ರಿ 10.30ರ ಸಮಯದಲ್ಲಿ ಶಿರಾ ತಾಲ್ಲೂಕಿನ ಚಿಕ್ಕದಾಸರಹಳ್ಳಿಯವನಾದ ಕೋಟಕ್ ಮಹೇಂದ್ರ ಬ್ಯಾಂಕಿನ ರಿಕವರಿ ಎಕ್ಸಿಕ್ಯುಟೀವ್ ನಟರಾಜು.ಸಿ ಎಂಬಾತ ದರೋಡೆ ಕಥೆ ಕಟ್ಟಿ ಪೊಲೀಸರಿಗೆ ದೂರು ನೀಡಿದ್ದನು.

ಅಂದು ರಾತ್ರಿ 7.30ರ ಸಮಯದಲ್ಲಿ ಬ್ಯಾಂಕಿನ ರಿಕವರಿ ಮೊತ್ತ 7.53 ಲಕ್ಷ ರೂ.ಗಳನ್ನು ತನ್ನ ಬ್ಯಾಗಿನಲ್ಲಿಟ್ಟುಕೊಂಡು ಶಿರಾ ತಾಲೂಕಿನ ಯರಗುಂಟೆ ಗೇಟ್‍ನಿಂದ ಶಿರಾ ಕಡೆಗೆ ಬರುವಾಗ, ಉಲ್ಲಾಸ್ ತೋಪಿನ ಬಳಿ ಯಾರೋ ಇಬ್ಬರು ಅಪರಿಚಿತರು ಕಣ್ಣಿಗೆ ಕಾರದ ಪುಡಿಯನ್ನು ಎರಚಿ, ಕಬ್ಬಿಣದ ಚೈನ್ ನಿಂದ ಹೊಡೆದು, ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಶಿರಾ ಪೊಲೀಸರಿಗೆ ದೂರು ನೀಡಿದ್ದನು.

# ತನಿಖೆ ಆರಂಭಿಸಿದ ತಂಡ:
ಪ್ರಕರಣದ ಆರೋಪಿಗಳು ಮತ್ತು ಕಳವು ಹಣವನ್ನು ಪತ್ತೆ ಮಾಡಲು ಡಿವೈಎಸ್ಪಿ ಕುಮಾರಪ್ಪ ಅವರ ಮಾರ್ಗದರ್ಶನದಲ್ಲಿ ಶಿರಾ ನಗರ ಠಾಣೆಯ ಇನ್‍ಸ್ಪೆಕ್ಟರ್ ಹನುಮಂತಪ್ಪ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ತನಿಖೆ ಆರಂಭಿಸಿದ್ದರು.

ಪೊಲೀಸರ ತನಿಖೆಗೆ ಹೂಸ ತಿರುವು ಕೊಟ್ಟ ಮೆಡಿಕಲ್ ಸ್ಟೋರ್ ಮಾಲಿಕ: ಪೊಲೀಸರು ಹಲ್ಲೆಗೆ ಒಳಗಾಗಿದ್ದ ಆಶೋಕ್ ಎಂಬುವನ ಫೋನ್ ಕಾಲ್ ಡೀಟೈಲ್ಸ್ ತೆಗೆದುಕೊಂಡು ತನಿಖೆ ನಡೆಸಿದಾಗ ಮೆಡಿಕಲ್ ಸ್ಟೋರ್ ಮಾಲಿಕ ಫೋನ್ ಮುಖಾಂತರ ನಟರಾಜ್ ಅವರಿಗೆ ಕಾಲ್ ಮಾಡಿ ನಂಬರ್ ಡಿಲೀಟ್ ಮಾಡಿದ್ದು, ನಂತರ ಡಿವೈಎಸ್ಪಿ ಕುಮಾರಪ್ಪ ಅವರು ಮೆಡಿಕಲ್ ಸ್ಟೋರ್ ಮಾಲಿಕನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಮಹತ್ವದ ಸುಳಿವು ಸಿಕ್ಕಿತ್ತು.

ವಿಚಾರಣೆ ನಡೆಸಿದಾಗ ದೂರು ಕೊಟ್ಟವನು ಸೇರಿ ಇಬ್ಬರು ಆರೋಪಿಗಳು ತಾವೇ ಹಣವನ್ನು ತೆಗೆದುಕೊಂಡು ಹೋಗಿ ಬಚ್ಚಿಟ್ಟು, ರಾಬರಿಯಾದಂತೆ ಘಟನೆ ಸೃಷ್ಟಿ ಮಾಡಿ, ಪೊಲೀಸ್ ಠಾಣೆಗೆ ದೂರು ಕೊಟ್ಟಿರುವುದಾಗಿ ಬಾಯಿ ಬಿಟ್ಟರು.

ಆರೋಪಿಗಳು ಬಚ್ಚಿಟ್ಟಿದ್ದ 7,53,000 ರೂ. ಹಣ ಹಾಗೂ ಕೃತ್ಯಕ್ಕೆ ಬಳಸಿದ ಎರಡು ಮೋಟಾರ್ ಸೈಕಲ್‍ಗಳು, 3 ಮೊಬೈಲ್ ಗಳು, ಒಂದು ಸೈಕಲ್ ಚೈನ್ ಹಾಗೂ ಖಾರದಪುಡಿಯ ಪ್ಲಾಸ್ಟಿಕ್ ಕವರ್ ಮತ್ತು ಬಾಕ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಿಗೂಢವಾಗಿದ್ದ ಪ್ರಕರಣವನ್ನು ಭೇದಿಸಿದ ವಿಶೇಷ ತಂಡದ ಕಾರ್ಯವೈಖರಿ ಬಗ್ಗೆ ಎಸ್‍ಪಿ ಕೋನವಂಶಿ ಕೃಷ್ಣ ಅಭಿನಂದಿಸಿದ್ದಾರೆ. ಪೊಲೀಸ್ ಇನ್ಸ್‍ಪೆಕ್ಟರ್ ಹನುಮಂತಪ್ಪ ಪಿ.ಬಿ., ಶಿರಾ ಪೊಲೀಸ್ ಠಾಣೆ ಅವರ ನೇತೃತ್ವದಲ್ಲಿ ಪಿಎಸ್‍ಐ ಭಾರತಿ ಎಸ್. ಸಿಬ್ಬಂದಿಗಳಾದ ನಾಗರಾಜು, ರಂಗನಾಥ, ನಂಜೇಗೌಡ, ಶಿವಕುಮಾರ, ಮಂಜುನಾಥ ಸ್ವಾಮಿ ಕೆ.ಬಿ., ಗೋಪಿನಾಥ, ನಾಗರಾಜು ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ನರಸಿಂಹರಾಜು ಅವರುಗಳ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin