ದುಬಾರಿ ಬೆಲೆಗೆ ರೆಮಿಡಿಸಿವಿರ್ ಮಾರುತ್ತಿದ್ದ ವೈದ್ಯ ಸೇರಿದಂತೆ ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ.14-ಕೊರೊನಾ ಸೋಂಕಿತನಿಗೆ ಹಂಚಿಕೆಯಾಗಿದ್ದ ರೆಮಿಡಿಸಿವಿರ್ ಔಷಧಿಯನ್ನು ರೋಗಿಗೆ ನೀಡದೆ ಬೇರೆಯವರಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿಕೊಂಡಿದ್ದ ವೈದ್ಯಾಧಿಕಾರಿ ಹಾಗೂ ಆಸ್ಪತ್ರೆಯ ಹೌಸ್ ಕೀಪಿಂಗ್ ಮ್ಯಾನೇಜರ್‍ನನ್ನು ಬಂಧಿಸಿರುವ ಸಂಜಯನಗರ ಪೊಲೀಸರು ಎರಡು ರೆಮಿಡಿಸಿವಿರ್ ಚುಚ್ಚುಮದ್ದುಗಳು, ಒಂದು ದ್ವಿಚಕ್ರ ವಾಹನ, ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

ಹೊಸೂರು ರಸ್ತೆಯಲ್ಲಿರುವ ಮಾತೃ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಬಿಟಿಎಂ ಬಡಾವಣೆಯ ವೈದ್ಯ ಡಾ.ಸಾಗರ್ ಹಾಗೂ ಹೌಸ್ ಕೀಪಿಂಗ್ ಮ್ಯಾನೇಜರ್ ಕಾಮಾಕ್ಷಿಪಾಳ್ಯದ ನಿವಾಸಿ ಕೃಷ್ಣ ಬಂಧಿತ ಆರೋಪಿಗಳು.

ಸಂಜಯನಗರದಲ್ಲಿರುವ ಆರ್‍ಎಂವಿ ಆಸ್ಪತ್ರೆ ಹತ್ತಿರ ಇಬ್ಬರು ರೆಮಿಡಿಸಿವಿರ್ ಔಷಧಿಯನ್ನು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಬಗ್ಗೆ ಬಂದ ಮಾಹಿತಿಯನ್ನಾಧರಿಸಿ ಪಿಎಸ್‍ಐ ಲೋಕೇಶ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ವೈದ್ಯ ಮಾತೃ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅಲ್ಲಿನ ಸೋಂಕಿತರೊಬ್ಬರಿಗೆ ಹಂಚಿಕೆಯಾಗಿದ್ದ 10 ರೆಮಿಡಿಸಿವಿರ್ ವಯಲ್‍ಗಳಲ್ಲಿ ಎರಡನ್ನು ರೋಗಿಗೆ ನೀಡದೆ ಆಸ್ಪತ್ರೆಯ ಹೌಸ್ ಕೀಪಿಂಗ್ ಮ್ಯಾನೇಜರ್ ಕೃಷ್ಣನೊಂದಿಗೆ 3.500 ಬೆಲೆಯ ವಯಲ್‍ಗಳನ್ನು 30 ರಿಂದ 40 ಸಾವಿರಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎನ್ನಲಾಗಿದೆ.

ಈ ಹಿಂದೆ ಇದೇ ರೀತಿ ಬೇರೆ ಸೋಂಕಿತರಿಗೆ ಹಂಚಿಕೆಯಾಗಿದ್ದ ನಾಲ್ಕು ರೆಮಿಡಿಸಿವಿರ್ ವಯಲ್‍ಗಳನ್ನು ಡಾ.ಸಾಗರ್ ಅವರು ಕೃಷ್ಣನ ಮೂಲಕ ದುಬಾರಿ ಬೆಲೆಗೆ ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸಂಜಯನಗರ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

Facebook Comments

Sri Raghav

Admin