ಬೆಂಗಳೂರಲ್ಲಿ ಭಾರಿ ದುರಂತ : ಅಕ್ಕ-ಪಕ್ಕದ ಬಹು ಮಹಡಿ ಕಟ್ಟಡಗಳು ಕುಸಿದು ನಾಲ್ವರು ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.10- ಅಕ್ಕ-ಪಕ್ಕದ ಎರಡು ಬಹು ಮಹಡಿ ಕಟ್ಟಡಗಳು ಕುಸಿದು ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು , ಅವಶೇಷಗಳಡಿ ಸಿಲುಕಿಕೊಂಡಿದ್ದ 7 ಮಂದಿಯನ್ನು ರಕ್ಷಿಸಲಾಗಿದೆ.ಅವಶೇಷಗಳಡಿ ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯ ಮುಂದುವರೆದಿದೆ.

ದುರಂತದಲ್ಲಿ ಮೃತಪಟ್ಟವರನ್ನು ನಾರಾಯಣ (26), ನಿರ್ಮಲಾ (20), ಶಂಭು ಕುಮಾರ್ (27) ಹಾಗೂ 4 ವರ್ಷದ ಅನುಷ್ಕಾ ಎಂದು ಗುರುತಿಸಲಾಗಿದೆ. ಪುಲಕೇಶಿ ನಗರ ಠಾಣಾ ವ್ಯಾಪ್ತಿಯ ಕುಕ್‍ಟೌನ್‍ನಲ್ಲಿ ನಡೆದಿದೆ.

ಕುಕ್‍ಟೌನ್‍ನ ಎರಡನೆ ಕ್ರಾಸ್‍ನ ಹಚಿನ್ಸ್ ರಸ್ತೆಯಲ್ಲಿರುವ 4 ಅಂತಸ್ತಿನ ಸಾಯಿ ಆದಿ ಅಂಬಾಲ್ ಅಪಾರ್ಟ್‍ಮೆಂಟ್ ಹಾಗೂ ಪಕ್ಕದ ನಿರ್ಮಾಣ ಹಂತದಲ್ಲಿರುವ ಮೂರಂತಸ್ತಿನ ಕಟ್ಟಡ ನಿನ್ನೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ. ಅಂಬಾಲ್ ಅಪಾರ್ಟ್‍ಮೆಂಟ್‍ನ ಬೇಸ್‍ಮೆಂಟ್‍ನಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಫ್ಯಾಮಿಲಿ ಹಾಗೂ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮರಗೆಲಸ ಮಾಡುತ್ತಿದ್ದ 13ಕ್ಕೂ ಹೆಚ್ಚು ಮಂದಿ ಬಿಹಾರ, ರಾಜಸ್ತಾನ, ನೇಪಾಳ ಮೂಲದವರು ಸಿಲುಕಿಕೊಂಡಿದ್ದರು.

ಘಟನಾ ಸ್ಥಳಕ್ಕೆ ದೌಡಾಯಿಸಿದ ಎನ್‍ಡಿಆರ್‍ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಅವಶೇಷಗಳಡಿ ಸಿಲುಕಿದ್ದ ಏಳು ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು , ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಾದ ಉತ್ತಮ್, ಸಂತೋಷ್, ಉಮೇಶ್, ಅಮೀರ್, ಬೆತ್ತಾಂ, ರಾಮ್ ಮತ್ತು ಮಂಜುದೇವಿ ಎಂಬುವರನ್ನು ರಕ್ಷಿಸಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಖಗನ್ ಎಂಬ ಮತ್ತೊಬ್ಬ ಕಾರ್ಮಿಕನ ರಕ್ಷಣೆಗಾಗಿ ಎನ್‍ಡಿಆರ್ ಎಫ್ ಸಿಬ್ಬಂದಿ ಹುಡುಕಾಟ ನಡೆಸುತ್ತಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಕಾರ್ಪೆಂಟರ್ ಮೇಸ್ತ್ರಿ ರಾಮಲಿಂಗಂ ಎಂಬುವರು ಅವಶೇಷಗಳಡಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ. ಅವಶೇಷಗಳಡಿ ಇರುವ ಇಬ್ಬರು ಕಾರ್ಮಿಕರ ಜತೆ ಅಗ್ನಿಶಾಮಕ ಸಿಬ್ಬಂದಿ ಮಾತನಾಡುತ್ತಿದ್ದು , ಅವರನ್ನು ರಕ್ಷಿಸಲು ಹರಸಾಹಸ ಮಾಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಕೆ.ಜೆ.ಜಾರ್ಜ್, ಮೇಯರ್ ಗಂಗಾಂಬಿಕೆ, ಉಪ ಮೇಯರ್ ಭದ್ರೇಗೌಡ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಕ್ರಮ ಕಟ್ಟಡಗಳ ಪತ್ತೆಗೆ ಡಿಸಿಎಂ ಸೂಚನೆ: ಅನುಮತಿ ಪಡೆಯದೆ ಹೆಚ್ಚುವರಿ ಮಹಡಿ ನಿರ್ಮಿಸಲು ಮುಂದಾಗಿರುವುದೇ ಕಟ್ಟಡ ಕುಸಿತಕ್ಕೆ ಪ್ರಮುಖ ಕಾರಣ. ಕಟ್ಟಡಕ್ಕೆ ಸಮರ್ಪಕವಾದ ಮೆಟಿರಿಯಲ್ ಬಳಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.

ಕಟ್ಟಡದ ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯ ನಡೆಯುತ್ತಿದ್ದು , ರಕ್ಷಿಸಲ್ಪಟ್ಟ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ನೀಡಲಾಗುವುದು. ಗಾಯಗೊಂಡಿರುವವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ ಎಂದು ಅವರು ಹೇಳಿದರು.

ಬೆಂಗಳೂರು ನಗರದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು , ಅಂತಹ ಕಟ್ಟಡಗಳನ್ನು ಗುರುತಿಸಿ ತೆರವುಗೊಳಿಸುವಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಡಿಸಿಎಂ ತಿಳಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin