ಇಬ್ಬರ ಮಕ್ಕಳ ಮಿತಿ ಕಾನೂನಿಗೆ ಆರ್‌ಎಸ್‌ಎಸ್‌ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

ಲಖನೌ, ಜ.19-ಕುಟುಂಬಕ್ಕೆ ಇಬ್ಬರೇ ಮಕ್ಕಳಿರಬೇಕೆಂಬ ಕಾನೂನಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂಪೂರ್ಣ ಬೆಂಬಲ ಘೋಷಿಸಿದೆ. ಅಯೋಧ್ಯೆ ರಾಮಮಂದಿರ ನಿರ್ಮಾಣ, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಪರವಾಗಿ ದಶಕಗಳ ಕಾಲ ಆಂದೋಲನ ನಡೆಸಿ ಯಶಸ್ವಿಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಂದಿನ ಗುರಿ ಒಂದು ದಂಪತಿಗೆ ಇಬ್ಬರು ಮಕ್ಕಳು ಇರಬೇಕೆಂಬುದಾಗಿದೆ.

ಈ ಕುರಿತು ಸ್ವತಃ ಆರ್‍ಎಸ್‍ಎಸ್ ಮುಖ್ಯಸ್ಥರೇ ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ಭವಿಷ್ಯದ ಅಜೆಂಡಾ ಕೂಡ ಇದೇ ಆಗುವ ಸಾಧ್ಯತೆಗಳಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಬೇಕು ಎಂದು ಮೋಹನ್ ಭಾಗವತ್ ಅವರು ಪ್ರತಿಪಾದಿಸಿದ್ದಾರೆ. ಅಲ್ಲದೆ, ಪ್ರತಿ ದಂಪತಿಗೆ ಎರಡು ಮಕ್ಕಳ ಮಿತಿ ಇರಬೇಕು ಎಂಬ ಕಾನೂನು ದೇಶದ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳಲಿದೆ.

ಇಬ್ಬರು ಮಕ್ಕಳ ಮಿತಿಗೆ ಕರೆ ನೀಡುವ ಯಾವುದೇ ಕಾನೂನನ್ನು ಸಂಘಟನೆ ಬೆಂಬಲಿಸಲಿದೆ ಎಂದು ಹೇಳಿದ್ದಾರೆ. ಸಂಘದ ಅಜೆಂಡಾಕ್ಕೆ ಒಂದು ದಂಪತಿ-2 ಮಗು ವಿಚಾರವನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಆದರೆ, ಈ ಕುರಿತು ನಿರ್ಧಾರ ಕೈಗೊಳ್ಳುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದು ಭಾಗವತ್ ತಿಳಿಸಿದ್ದಾರೆ.

ಜನಸಂಖ್ಯೆ ನಿಯಂತ್ರಣದ ಬಗ್ಗೆ ಸರ್ಕಾರ ಅಂತಿಮ ನಿರ್ಣಯ ಕೈಗೊಳ್ಳುವುದು ಇಂದಿನ ಅಗತ್ಯವಾಗಿದೆ. ಈ ಕಾನೂನು ಯಾವುದೇ ಧರ್ಮಕ್ಕೆ ಸಂಬಂಧಪಟ್ಟಿದ್ದಲ್ಲ. ಎಲ್ಲರಿಗೂ ಸಂಬಂಧಿಸಿದ ಕಾನೂನು ಇದು ಎಂದು ಉತ್ತರಪ್ರದೇಶದ ಮುದಾರಾಬಾದ್‍ನಲ್ಲಿ ನಡೆದ ಸಂಘ ಪರಿವಾರದ ಹಿರಿಯ ಮುಖಂಡರ ಸಭೆಯಲ್ಲಿ ಭಾಗವತ್ ಹೇಳಿದ್ದಾರೆ.

Facebook Comments