ಪೊಲೀಸರಿಂದಲೇ ಗಾಂಜಾ ಮಾರಾಟ, ಬಲೆಗೆ ಬಿದ್ದ ಇಬ್ಬರು ಕಾನ್‍ಸ್ಟೆಬಲ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.18- ಮುಖ್ಯಮಂತ್ರಿ ನಿವಾಸದ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸ್ ಕಾನ್‍ಸ್ಟೆಬಲ್‍ಗಳು ಗಾಂಜಾ ಮಾರಾಟ ಯತ್ನ ಆರೋಪದಲ್ಲಿ ಆರ್‍ಟಿ ನಗರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯ ಶಿವಕುಮಾರ್ ಮತ್ತು ಸಂತೋಷ್ ಬಂಧಿತ ಕಾನ್‍ಸ್ಟೆಬಲ್‍ಗಳು. ಇವರಿಂದ 400ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಆರ್‍ಟಿ ನಗರದಲ್ಲಿ ಸಿಎಂ ಮನೆಯಿದೆ. ಇಲ್ಲಿನ ಭದ್ರತೆಗಾಗಿ ಕೋರಮಂಗಲ ಪೊಲೀಸ್ ಠಾಣೆಯಿಂದ ಇಬ್ಬರು ಕಾನ್‍ಸ್ಟೆಬಲ್‍ಗಳನ್ನು ನಿಯೋಜಿಸಿದ್ದರು. ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಈ ಇಬ್ಬರು ತಮ್ಮ ಕರ್ತವ್ಯವನ್ನು ದುರುಪಯೋಗಪಡಿಸಿಕೊಂಡು 80 ಅಡಿ ರಸ್ತೆಯಲ್ಲಿ  ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದರೆಂಬ ಆರೋಪ ಕೇಳಿಬಂದಿದೆ.

ಹೊಯ್ಸಳ ಪೊಲೀಸರು ಈ ಮಾರ್ಗದಲ್ಲಿ ಕರ್ತವ್ಯ ನಿರತರಾಗಿದ್ದಾಗ ಈ ಇಬ್ಬರು ಕಾನ್‍ಸ್ಟೆಬಲ್‍ಗಳ ಬಗ್ಗೆ ಅನುಮಾನಗೊಂಡು ವಿಚಾರಿಸಿದಾಗ ಅವರ ಬಳಿ ಗಾಂಜಾ ಪತ್ತೆಯಾಗಿದ್ದು, ಈ ಗಾಂಜಾವನ್ನು ಮೋಸ್ಟ್ ವಾಂಟೆಡ್ ಡ್ರಗ್ ಪೆಡ್ಲರ್‍ಗಳಿಂದ ತರಿಸಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ.  ಆರ್‍ಟಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Facebook Comments