ಬ್ರೇಕಿಂಗ್ : ಬೆಂಗಳೂರಿನಲ್ಲಿ ಎಎಸ್‍ಐ ಸೇರಿ ಕೊರೊನಾಗೆ ಇಬ್ಬರು ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.16- ಎಎಸ್‍ಐ ಸೇರಿದಂತೆ ಕೊರೊನಾ ಮಹಾಮಾರಿಗೆ ನಗರದಲ್ಲಿ ಮತ್ತಿಬ್ಬರು ಬಲಿಯಾಗಿದ್ದಾರೆ.  ಕೊರೊನಾ ಸೋಂಕಿಗೆ ಪೊಲೀಸರೊಬ್ಬರು ಬಲಿಯಾಗಿರುವುದು ಇದೇ ಮೊದಲು. ವಿವಿ ಪುರಂ ಪೊಲೀಸ್ ಠಾಣೆಯ ಎಎಸ್‍ಐ ಅವರು ಇದೇ 14ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು.

ಸುಂಕದಕಟ್ಟೆ ನಿವಾಸಿಯಾಗಿದ್ದ ಎಎಸ್‍ಐ ಅವರು ಈ ತಿಂಗಳು ಸೇವೆಯಿಂದ ನಿವೃತ್ತರಾಗಬೇಕಿತ್ತು. 14ರಂದು ಮನೆಯಲ್ಲೇ ಕುಸಿದು ಬಿದ್ದರು. ತಕ್ಷಣ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಅವರ ಗಂಟಲು ದ್ರವವನ್ನು ಪರೀಕ್ಷೆಗೊಳಪಡಿಸಿದಾಗ ಎಎಸ್‍ಐಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಸೋಂಕಿನಿಂದ ಅವರು ಮೃತಪಟ್ಟಿರುವುದರಿಂದ ಕೇವಲ 5 ಮಂದಿ ಸಂಬಂಧಿಕರ ಸಮ್ಮುಖದಲ್ಲಿ ಪ್ರೋಟೋಕಾಲ್ ಅನ್ವಯ ಅವರ ಶವ ಸಂಸ್ಕಾರ ನಡೆಸಲಾಗುವುದು.ಅದೇ ರೀತಿ ಜಯದೇವ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದ 64 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಕೊರೊನಾಗೆ ಬಲಿಯಾಗಿದ್ದಾರೆ.

# ಮತ್ತೊಬ್ಬ ಎಎಸ್‍ಐಗೂ ಸೋಂಕು:
ವಿವಿ ಪುರಂ ಠಾಣೆಯ ಎಎಸ್‍ಐ ಮೃತಪಟ್ಟ ಬೆನ್ನಲ್ಲೇ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯ ಎಎಸ್‍ಐ ಅವರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 59 ವರ್ಷದ ಎಎಸ್‍ಐ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರನ್ನು ನಿಗದಿತ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

# ಕಂಟೈನ್ಮೆಂಟ್ ಝೋನ್ ಹೆಚ್ಚಳ:
ಕೊರೊನಾ ಭೂತ ಸಿಲಿಕಾನ್ ಸಿಟಿಯನ್ನು ಬೆಂಬಿಡದೆ ಕಾಡುತ್ತಿರುವುದರಿಂದ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವುದರಿಂದ ಕಂಟೈನ್ಮೆಂಟ್ ಝೋನ್‍ಗಳು ಹೆಚ್ಚಾಗುತ್ತಿವೆ. 198 ವಾರ್ಡ್‍ಗಳ ಪೈಕಿ ಈಗಾಗಲೇ 191 ಕಂಟೈನ್ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದ್ದು, ಝೋನ್‍ಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವುದು ಗ್ಯಾರಂಟಿ.

# ಸೋಂಕು ತಡೆಗಟ್ಟಲು ಪ್ಲಾನ್:
ನಗರದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವುದರಿಂದ ಬಿಬಿಎಂಪಿ ಅಧಿಕಾರಿಗಳು ಆ್ಯಂಟಿ ಕಂಟ್ರೋಲ್ ಟ್ರಾಕಿಂಗ್ ಯೋಜನೆ ಮೂಲಕ ಸಾಮೂಹಿಕ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದಾರೆ. ಸಾರ್ವಜನಿಕ ಸ್ಥಳ, ಮಾಲ್‍ಗಳು, ಮಾರುಕಟ್ಟೆಗಳಲ್ಲಿ ಸಾಮೂಹಿಕ ಕೊರೊನಾ ತಪಾಸಣೆ ನಡೆಸುವ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದೆ.

Facebook Comments