ನೆಲಮಂಗಲ ಬಳಿ ಕಾರು-ಲಾರಿ ನಡುವೆ ಭೀಕರ ಅಪಘಾತ, ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ನೆಲಮಂಗಲ,ಆ.27-ನಾಲ್ವರು ಸ್ನೇಹಿತರು ಹೋಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಕ್ಕದ ರಸ್ತೆಗೆ ನುಗ್ಗಿ ಗ್ಯಾಸ್ ಲ್ಯಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.

ಮೃತಪಟ್ಟವರನ್ನು ಬೆಂಗಳೂರು ಪೀಣ್ಯಾ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥ್ ನಗರದ ಚೇತನ್ ಮತ್ತು ನವೀನ್ ಎಂದು ಗುರುತಿಸಲಾಗಿದೆ.  ಗಂಭೀರ ಗಾಯಗೊಂಡಿರುವ ಚಂದು ಮತ್ತು ಆದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೇತನ್, ನವೀನ್, ಚಂದು ಮತ್ತು ಆದಿ ಇಟಿಯೋಸ್ ಕಾರಿನಲ್ಲಿ ಕುಣಿಗಲ್ ಕಡೆಗೆ ಹೋಗುತ್ತಿದ್ದರು. ನೆಲಮಂಗಲ ಸಂಚಾರಿ ಠಾಣೆ ವ್ಯಾಪ್ತಿಯ ಬೆಂಗಳೂರು-ಕುಣಿಗಲ್ ಬೈಪಾಸ್ ರಸ್ತೆಯ ಬಿಪಿ ಇಂಡಿಯನ್ ಶಾಲೆ ಮುಂಭಾಗ ಇವರ ಕಾರು ನಿಯಂತ್ರಣ ತಪ್ಪಿ ಏಕಾಏಕಿ ಡಿವೈಡರ್ ಹಾರಿ ಪಕ್ಕದ ರಸ್ತೆಗೆ ನುಗ್ಗಿ ಈ ಮಾರ್ಗದಲ್ಲಿ ಬರುತ್ತಿದ್ದ ಗ್ಯಾಸ್ ಲಾರಿಗೆ ಕಾರು ಅಪ್ಪಳಿಸಿದ್ದರಿಂದ ಚೇತನ್ ಮತ್ತು ನವೀನ್ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ನೆಲಮಂಗಲ ಸಂಚಾರಿ ಠಾಣೆ ಸಿಪಿಐ ವೀರೇಂದ್ರ ಪ್ರಸಾದ್ ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿ ಕಾರಿನಲ್ಲಿ ಸಿಕ್ಕಿಕೊಂಡಿದ್ದ ಗಾಯಾಳುವನ್ನು ತಕ್ಷಣ ಹೊರಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.

Facebook Comments

Sri Raghav

Admin