ಇಬ್ಬರು ಲಷ್ಕರ್ ಉಗ್ರರನ್ನು ಹೊಡೆದುರುಳಿಸಿದ ಯೋಧರು

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಸೆ.25- ಕಾಶ್ಮೀರ ಕಣಿವೆಯಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆಯನ್ನು ಯೋಧರು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಡಿ ನಡೆದ ಸುದೀರ್ಘ ಗುಂಡಿನ ಕಾಳಗದಲ್ಲಿ ಲಷ್ಕರ್-ಎ-ತಯ್ಬಾ (ಎಲ್‍ಇಟಿ) ಉಗ್ರಗಾಮಿ ಸಂಘಟನೆಯ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ.

ಮೃತ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಶಿರ್‍ಹಮಾ ಎಂಬಲ್ಲಿ ಭಯೋತ್ಪಾದಕರು ಅವಿತಿಟ್ಟುಕೊಂಡಿದ್ದು, ವಿಧ್ವಂಸಕ ಕೃತ್ಯ ಎಸಗಲು ಸಜ್ಜಾಗಿದ್ದಾರೆ ಎಂಬ ಖಚಿತ ಮಾಹಿತಿ ಭದ್ರತಾ ಪಡೆಗಳಿಗೆ ಲಭಿಸಿತು.

ತಕ್ಷಣ ಕಾರ್ಯಪ್ರವೃತ್ತರಾದ ಯೋಧರು ನಿನ್ನೆ ರಾತ್ರಿಯಿಂದ ಆ ಪ್ರದೇಶವನ್ನು ಸುತ್ತುವರೆದಿದ್ದರು. ಇದೇ ಸಂದರ್ಭದಲ್ಲಿ ಭಯೋತ್ಪಾದಕರು ಯೋಧರ ಮೇಲೆ ಗುಂಡು ಹಾರಿಸಿದಾಗ ಎನ್‍ಕೌಂಟರ್ ಆರಂಭವಾಯಿತು.

ನಿನ್ನೆ ರಾತ್ರಿಯಿಂದ ಇಂದು ಮುಂಜಾನೆಯವರೆಗೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಎಲ್‍ಇಟಿ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಉನ್ನತ ಸೇನಾಕಾರಿಯೊಬ್ಬರು ತಿಳಿಸಿದ್ದಾರೆ.

ಹತ ಉಗ್ರರಿಂದ ಎಕೆ47, ಎಕೆ56 ಪಿಸ್ತೂಲ್, ಗ್ರೆನೆಡ್ ಹಾಗೂ ಬುಲೆಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಎನ್‍ಕೌಂಟರ್ ವೇಳೆ ಪರಾರಿಯಾಗಿರುವ ಇತರ ಉಗ್ರರಿಗಾಗಿ ಆ ಪ್ರದೇಶದಲ್ಲಿ ತೀವ್ರ ಶೋಧ ಮುಂದುವರೆದಿದೆ.

Facebook Comments

Sri Raghav

Admin