ಬ್ರೇಕಿಂಗ್ : ಬೆಂಗಳೂರಲ್ಲಿ ಕೊರೋನಾಗೆ ಮತ್ತೆರೆಡು ಬಲಿ..! ಕಂಟೈನ್ಮೆಂಟ್ ಝೋನ್‍ಗಳ ಸಂಖ್ಯೆ 54ಕ್ಕೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.9- ನಿನ್ನೆಯಷ್ಟೆ ಕೊರೊನಾ ಮಹಾಮಾರಿಗೆ ಮೂವರು ಬಲಿಯಾಗಿದ್ದ ಬೆನ್ನಲ್ಲೇ ಮತ್ತಿಬ್ಬರು ಸಾವನ್ನಪ್ಪಿರುವುದು ನಗರವನ್ನು ಬೆಚ್ಚಿಬೀಳಿಸಿದೆ. ಕೋನೇನ ಅಗ್ರಹಾರ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜಪೇಟೆ ನಿವಾಸಿ 10 ದಿನಗಳ ಹಿಂದೆ ಜ್ವರ, ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ನಿನ್ನೆ ತಡರಾತ್ರಿ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಅದೇ ರೀತಿ ರಾಜೀವ್‍ಗಾಂ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಆಗಿದ್ದ 65 ವರ್ಷದ ಡಯಾಲಿಸಿಸ್‍ಗೆ ಒಳಗಾಗಿದ್ದ ವ್ಯಕ್ತಿ ಕೂಡ ಮಹಾಮಾರಿಗೆ ಬಲಿಯಾಗಿದ್ದಾರೆ. ದಿನೇ ದಿನೇ ನಗರದಲ್ಲಿ ಸೋಂಕಿತರ ಸಂಖ್ಯೆ ಜತೆಗೆ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

# ಕಂಟೈನ್ಮೆಂಟ್ ಝೋನ್ ಹೆಚ್ಚಳ:
ಲಾಕ್‍ಡೌನ್ ನಂತರ ನಗರದಲ್ಲಿ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ದಿನೇ ದಿನೇ ಹೊಸ ಸೋಂಕಿತರು ಪತ್ತೆಯಾಗುತ್ತಿರುವುದರಿಂದ ಕಂಟೈನ್ಮೆಂಟ್ ಝೋನ್‍ಗಳನ್ನು ಹೆಚ್ಚಳ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.

ಕಳೆದ 10 ದಿನಗಳಿಂದ 30 ಹೊಸ ಪ್ರದೇಶಗಳಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿರುವುದರಿಂದ 46 ಇದ್ದ ಕಂಟೈನ್ಮೆಂಟ್ ಝೋನ್‍ಗಳನ್ನು 54ಕ್ಕೆ ಹೆಚ್ಚಳ ಮಾಡಲಾಗಿದೆ. ದಾಸಹರಳ್ಳಿ ವಲಯದ ಬಾಗಲಗುಂಟೆ, ಚೊಕ್ಕಸಂದ್ರ, ಪಶ್ಚಿಮ ವಲಯದ ಛಲವಾದಿ ಪಾಳ್ಯದಲ್ಲಿ ಎರಡು ಕಂಟೈನ್ಮೆಂಟ್ ಪ್ರದೇಶಗಳನ್ನು ಬಂದ್ ಮಾಡಲಾಗಿದೆ.

ಅದೇ ರೀತಿ ಸಿಂಗಸಂದ್ರ, ಪಾದರಾಯನಪುರ, ಬೆಳ್ಳಂದೂರು, ವಿವಿ ಪುರಂ ಸೇರಿದಂತೆ ಒಟ್ಟು 54 ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್‍ಗಳೆಂದು ಗುರುತಿಸಿ ಆ ಪ್ರದೇಶಗಳನ್ನು ಬಂದ್ ಮಾಡಲಾಗಿದೆ.

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಂಟೈನ್ಮೆಂಟ್ ಝೊನ್‍ಗಳ ಸಂಖ್ಯೆಯೂ ಏರಿಕೆಯಾಗುತ್ತಿರುವುದರಿಂದ ಇಡೀ ವಾರ್ಡ್‍ಅನ್ನು ಬಂದ್ ಮಾಡುವ ಬದಲು ಸೋಂಕಿತನ ಮನೆ ಮತ್ತು ಆತ ವಾಸವಾಗಿರುವ ಸ್ಥಳವನ್ನು ಮಾತ್ರ ಕಂಟೈನ್ಮೆಂಟ್ ಮಾಡಲು ಬಿಬಿಎಂಪಿ ಅಕಾರಿಗಳು ತೀರ್ಮಾನಿಸಿದ್ದಾರೆ.

ಜೂನ್‍ನಲ್ಲಿ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಇದ್ದರೂ ಜನ ಬೇಕಾಬಿಟ್ಟಿ ಓಡಾಡುತ್ತಿರುವುದರಿಂದ ಹೊಸ ಪ್ರದೇಶಗಳಿಗೂ ಸೋಂಕು ಹರಡುತ್ತಿದೆ.

ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜುಲೈ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟುಗೊಳ್ಳುವ ಸಾಧ್ಯತೆಗಳಿವೆ.
ಸೋಂಕು ಲಕ್ಷಣಗಳು ಉಲ್ಬಣಿಸದಂತೆ ಬಿಬಿಎಂಪಿ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ.

ಇದರ ಜತೆಗೆ ನಾಗರಿಕರೂ ಸೋಂಕಿನಿಂದ ದೂರ ಉಳಿಯಬೇಕಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಅನಾವಶ್ಯಕ ಓಡಾಟಕ್ಕೆ ಕಡಿವಾಣ ಹಾಕುವ ಆವಶ್ಯಕತೆ ಇದೆ.

Facebook Comments

Sri Raghav

Admin