ಬೆಂಗಳೂರಲ್ಲಿ 2 ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.9- ಮದ್ಯದ ಪಾರ್ಟಿ ಸಮಯದಲ್ಲಿ ಯುವಕನೊಬ್ಬನನ್ನು ಆತನ ಸ್ನೇಹಿತರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ರಾತ್ರಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಿಂಗಸಂದ್ರದ ವಾಸಿ ಯೋಗೇಶ್ (28) ಕೊಲೆಯಾಗಿರುವ ಯುವಕ.
ನಿನ್ನೆ ರಾತ್ರಿ 8.30ರ ಸಮಯದಲ್ಲಿ ಜೆಎಸ್‍ಎಸ್ ಲೇ ಔಟ್‍ನ ಬಯಲು ಪ್ರದೇಶದಲ್ಲಿ ಯೋಗೇಶ್ ಮತ್ತು ಸ್ನೇಹಿತರು ಕಬಾಬ್ ಜತೆಗೆ ಮದ್ಯದ ಪಾರ್ಟಿ ಮಾಡುತ್ತಿದ್ದರು.

ಪಾರ್ಟಿ ಸಂದರ್ಭದಲ್ಲಿ ಮದ್ಯ ಸಾಕಾಗದ ಕಾರಣ ಯೋಗೇಶನೇ ಸ್ನೇಹಿತನಿಗೆ ಮದ್ಯ ತರುವಂತೆ ಹಣ ಕೊಟ್ಟು ಕಳುಹಿಸಿದ್ದ. ಸ್ನೇಹಿತ ಮದ್ಯದ ಜತೆಗೆ ಕಬಾಬ್ ಹಾಗೂ ಮಚ್ಚನ್ನು ತಂದಿದ್ದ. ಆ ಸಂದರ್ಭದಲ್ಲಿ ಸ್ನೇಹಿತರು ಯೋಗೇಶನನ್ನು ಮನ ಬಂದಂತೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಯೋಗೇಶನ ಮೃತ ದೇಹವನ್ನು ಸೆಂಟ್‍ಜಾನ್ ಆಸ್ಪತ್ರೆಯಲ್ಲಿಡಲಾಗಿದೆ. ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆ ಮಾಡಿ ಪರಾರಿಯಾಗಿರುವವರ ಪತ್ತೆಗೆ ಬಲೆ ಬೀಸಿದ್ದಾರೆ. ಕೊಲೆಗೆ ಕಾರಣ ಗೊತ್ತಾಗಿಲ್ಲ.

# ಜೈಲಿನಿಂದ ಹೊರ ಬಂದಿದ್ದ ರೌಡಿ ಫಿನಿಶ್ : 
ಬೆಂಗಳೂರು, ಆ.9- ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಯಾಗಿದ್ದ ಗೂಡ್ಸ್ ಆಟೋಚಾಲಕನನ್ನು ಗುಂಪೊಂದು ಕೊಚ್ಚಿ ಕೊಲೆ ಮಾಡಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬ್ಯಾಟರಾಯನಪುರದ ಶಾಮಣ್ಣ ಗಾರ್ಡನ್‍ನ ಇಸ್ಲಾಂ ಖಾನ್ (36) ಕೊಲೆಯಾದ ವ್ಯಕ್ತಿ. 2016ರಲ್ಲಿ ಬ್ಯಾಟರಾಯನಪುರ ಠಾಣೆಯಲ್ಲಿ ಕೊಲೆಯತ್ನ, 2018ರಲ್ಲಿ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣದಲ್ಲಿ ಇಸ್ಲಾಂಖಾನ್ ಆರೋಪಿಯಾಗಿದ್ದ.

ಗಂಭೀರ ಸ್ವರೂಪದ ಪ್ರಕರಣಗಳಿಂದಾಗಿ ಜೈಲು ಸೇರಿದ್ದ ಇಸ್ಲಾಂಖಾನ್ ಕಳೆದ ತಿಂಗಳಷ್ಟೆ ಬಿಡುಗಡೆಯಾಗಿದ್ದ. ಜೈಲಿನಿಂದ ಹೊರ ಬಂದ ಬಳಿಕ ಗೂಡ್ಸ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಾರು ಇತರ ವಾಹನಗಳ ಖರೀದಿ, ಮಾರಾಟದ ಮಧ್ಯವರ್ತಿಯಾಗಿಯೂ ಕೆಲಸ ಮಾಡುತ್ತಿದ್ದ.

ನಿನ್ನೆ ರಾತ್ರಿ 11ರ ವೇಳೆ ಮನೆಗೆ ಹೋಗುತ್ತಿದ್ದ ಇಸ್ಲಾಂ ಖಾನ್ ಮೇಲೆ ಬ್ಯಾಟರಾಯನ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಿರಾ ಮಸೀದಿ ಬಳಿ ಗುಂಪೊಂದು ದಾಳಿ ಮಾಡಿ, ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದೆ.

ಗಂಭೀರ ಗಾಯಗೊಂಡಿದ್ದ ಇಸ್ಲಾಂಖಾನ್‍ನನ್ನು ಸ್ಥಳೀಯರು ತಕ್ಷಣವೇ ಕಿಮ್ಸï ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಗೆ ಹಳೆ ವೈಷಮ್ಯ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಮೃತರ ಸಹೋದರ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.

Facebook Comments

Sri Raghav

Admin