ಬೆಂಗಳೂರಿನಲ್ಲಿ ಎರಡು ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

# ಸೆಕ್ಯೂರಿಟಿ ಗಾರ್ಡ್ ತಲೆ ಜಜ್ಜಿ ಕೊಲೆ : 
ಬೆಂಗಳೂರು, ಜೂ.7- ಕಟ್ಟಡದ ವಾಚ್‍ಮೆನ್ ಒಬ್ಬರ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಜೆ.ಜೆ.ನಗರ ನಿವಾಸಿ ಶಿವಣ್ಣ (65) ಕೊಲೆಯಾಗಿರುವ ವಾಚ್‍ಮೆನ್. ಕಲಾಸಿಪಾಳ್ಯ ಠಾಣೆ ಸಮೀಪ ಕಾರ್ನೆಸ್ ಸರ್ಕಲ್ ಬಳಿ ಇರುವ ಬಿಲ್ಡಿಂಗ್‍ನಲ್ಲಿ ಶಿವಣ್ಣ ಕಳೆದ 15 ವರ್ಷಗಳಿಂದ ವಾಚ್‍ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ ಈತ ಇದೇ ಬಿಲ್ಡಿಂಗ್‍ನ ಎರಡನೇ ಮಹಡಿಗೆ ಊಟಕ್ಕೆ ಹೋಗಿದ್ದಾರೆ.

ಆ ಸಂದರ್ಭದಲ್ಲಿ ಅವರ ಪರಿಚಯಸ್ಥರು ಅಲ್ಲಿಗೆ ಬಂದಿದ್ದು, ಅವರ ನಡುವೆ ಜಗಳ ನಡೆದಿದೆ. ನಂತರ ಶಿವಣ್ಣ ಅವರ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿ ಬಂದಿದ್ದ ಆರೋಪಿಗಳು ಪರಾರಿಯಾಗಿದ್ದಾರೆ.

ಬೆಳಗ್ಗೆ ಯಾರೋ ಇದನ್ನು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಶಿವಣ್ಣ ಅವರನ್ನು ಯಾರು, ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.ಪರಿಚಯಸ್ಥರೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಶಿವಣ್ಣ ಕರ್ತವ್ಯ ನಿರ್ವಹಿಸುತ್ತಿದ್ದ ಬಿಲ್ಡಿಂಗ್‍ನಲ್ಲಿ ಮುತ್ತೂಟ್ ಫೈನಾನ್ಸ್ ಕಚೇರಿ ಕೂಡ ಇದ್ದು, ಯಾವುದೇ ಕಳ್ಳತನ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆ ಶವಾಗಾರದಲ್ಲಿಡಲಾಗಿದ್ದು, ಕಲಾಸಿಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

# ಜೈಲಿನಿಂದ ಹೊರ ಬಂದವನನ್ನು ಕೊಚ್ಚಿದರು : 
ಮನೆಗೆ ನುಗ್ಗಿ ದುಷ್ಕರ್ಮಿಗಳು ಇತ್ತೀಚೆಗೆ ಜೈಲಿನಿಂದ ಹೊರ ಬಂದಿದ್ದ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ರಾತ್ರಿ ಎಚ್‍ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್‍ಬಿಎಸ್ ನಗರದಲ್ಲಿ ನಡೆದಿದೆ.

ಮೃತನನ್ನು ಅರವಿಂದ ಅಲಿಯಾಸ್ ಪಾಗಲ್ ಸೀನ (27) ಎಂದು ಗುರುತಿಸಲಾಗಿದೆ. ಎಲ್‍ಬಿಎಸ್ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಅರವಿಂದ ಹಾಗೂ ಆತನ ಸ್ನೇಹಿತರು ತಂಗಿದ್ದರು.

ಕಳೆದ ರಾತ್ರಿ ಅಪರಿಚಿತರು ಅಲ್ಲಿಗೆ ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅರವಿಂದನ ಮೇಲೆ ಸಿದ್ದಾಪುರ, ಜೆಪಿ ನಗರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ.

ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಅರವಿಂದ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಎಂದು ಹೇಳಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿದ್ದಾರೆ.

ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು , ಸ್ಥಳಕ್ಕೆ ಧಾವಿಸಿರುವ ಎಚ್‍ಎಎಲ್ ಠಾಣೆ ಪೊಲೀಸರು ಪರಿಶೀಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments