2 ವಾರದಲ್ಲಿ ನ್ಯಾಯಮಂಡಳಿ ಹುದ್ದೆಗಳ ನೇಮಕಕ್ಕೆ ಸುಪ್ರೀಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.15- ದೇಶಾದ್ಯಂತ ನ್ಯಾಯಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಎರಡು ವಾರಗಳಲ್ಲಿ ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಇಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ಡಿ.ವೈ.ಚಂದ್ರಚೂಡ ನೇತೃತ್ವದ ನ್ಯಾಯಪೀಠ ರಾಷ್ಟ್ರಾದ್ಯಂತ ಇರುವ ಅರೆ ನ್ಯಾಯಾಂಗ ಸಂಸ್ಥೆಗಳಲ್ಲಿ ಭರ್ತಿಯಾಗದ ಹುದ್ದೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಸರಿಯಾದ ಕಾನೂನು ತಜ್ಞರು, ತಾಂತ್ರಿಕ ಸಲಹೆಗಾರರು, ಅಧಿಕಾರಿಗಳಿಲ್ಲದೆ ಸೊರಗುವಂತಹ ಪರಿಸ್ಥಿತಿ ಇದ್ದು, ಇದು ತೀವ್ರ ಕಳವಳಕಾರಿ ವಿಷಯ ಎಂದು ಹೇಳಿದೆ.

ಇದರ ನಡುವೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ನ್ಯಾಯಪೀಠದ ಮುಂದೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿ ಇನ್ನೆರಡು ವಾರಗಳಲ್ಲಿ ಆಯ್ಕೆ ಸಮಿತಿಯಿಂದ ಶಿಫಾರಸು ಮಾಡಲಾದ ವ್ಯಕ್ತಿಗಳ ಪಟ್ಟಿಯನ್ನು ಸಲ್ಲಿಸುವುದಾಗಿ ಭರವಸೆ ನೀಡಿದರು.

ವಿವಿಧ ಪ್ರಮುಖ ನ್ಯಾಯಾಧಿಕರಣಗಳು ಮತ್ತು ಮೇಲ್ಮನವಿ ನ್ಯಾಯಾಧಿಕರಣದಲ್ಲಿ ಸುಮಾರು 250ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ನ್ಯಾಯಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳು ಮತ್ತು ಅರೆ ನ್ಯಾಯಾಂಗ ಸಂಸ್ಥೆಗಳನ್ನು ನಿಯಂತ್ರಿಸುವ ಹೊಸ ಕಾನೂನು ಕುರಿತಾದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.

Facebook Comments