ಅಮೇರಿಕಾದಲ್ಲಿ ನಿಲ್ಲದ ಕೊರೋನಾ ಮರಣಮೃದಂಗ : 47,000ಕ್ಕೂ ಹೆಚ್ಚು ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಏ.23- ನರಹಂತಕ ಕೊರೊನಾ ವೈರಸ್ ದಾಳಿ ಅಮೆರಿಕದಲ್ಲಿ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದೆ. ಜಗತ್ತಿನ ಮಹಾ ಶಕ್ತಿಶಾಲಿ ದೇಶದಲ್ಲಿ ಈವರೆಗೆ 47,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 9 ಲಕ್ಷಕ್ಕೂ ಅಧಿಕ ಜನರಲ್ಲಿ ಮಾರಕ ಸೋಂಕು ದೃಢಪಟ್ಟಿದೆ.

ಸೋಂಕಿತರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಇನ್ನೆರಡು ದಿನಗಳಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 50,000 ದಾಟುವ ಆತಂಕವಿದೆ.
ವಾಷಿಂಗ್ಟನ್‍ನ ಜಾನ್ಸ್ ಹಾಪ್‍ಕಿನ್ಸ್ ಯೂನಿವರ್ಸಿಟಿ ಬಿಡುಗಡೆ ಮಾಡಿರುವ ಅಂಕ ಅಂಶಗಳ ಪ್ರಕಾರ, ಕಳೆದ 24 ತಾಸುಗಳ ಅವಧಿಯಲ್ಲಿ ಅಮೆರಿಕದಲ್ಲಿ 1,738 ಮಂದಿ ಬಲಿಯಾಗಿದ್ದಾರೆ. ಅಲ್ಲದೇ ಸುಮಾರು 4,000 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.

ಕಿಲ್ಲರ್ ವೈರಸ್ ಕೇಂದ್ರ ಬಿಂದು ಎನಿಸಿರುವ ನ್ಯೂಯಾರ್ಕ್ ನಗರವೊಂದರಲ್ಲೇ ಈವರೆಗೆ ಸುಮಾರು 19,000 ಮಂದಿಯನ್ನು ಕೊರೊನಾ ವೈರಸ್ ಬಲಿಪಡೆದಿದೆ. ಇಲ್ಲಿ ಸೋಂಕಿತರ ಸಂಖ್ಯೆ 3 ಲಕ್ಷ ಸನಿಹದಲ್ಲಿದೆ.ಅಮೆರಿಕದ ಎಲ್ಲ 50 ರಾಜ್ಯಗಳು ಒಂದಿಲ್ಲೊಂದು ರೀತಿಯಲ್ಲಿ ಕೊರೊನಾ ಕಂಟಕದಿಂದ ನರಳುವಂತಾಗಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಈ ಹೆಮ್ಮಾರಿಯನ್ನು ನಿಯಂತ್ರಿಸಲು ಹರಸಾಹಸ ಮುಂದುವರಿಸಿದೆ.

# ನಾವು ದಾಳಿಗೊಳಗಾಗಿದ್ದೇವೆ:
ಈ ಮಧ್ಯೆ ಶ್ವೇತಭನನದಲ್ಲಿ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ನಾವು ಭೀಕರ ದಾಳಿಗೆ ಒಳಗಾಗಿದ್ದೇವೆ. ಇದು ಸಾಮಾನ್ಯ ಫ್ಲೂ ಅಥವಾ ವಿಷಮಶೀತ ಜ್ವರವಲ್ಲ. ಇದು ಭಾರೀ ಆತಂಕಕಾರಿ ಆರೋಗ್ಯ ಪೀಡುಗಾಗಿದೆ ಎಂದು ನೊಂದು ನುಡಿದಿದ್ದಾರೆ. 1917ರ ನಂತರ ಅಮೆರಿಕ ಇದೇ ಮೊದಲ ಬಾರಿಗೆ ಇಂಥ ಅತ್ಯಂತ ಶೋಚನೀಯ ಪರಿಸ್ಥಿತಿಗೆ ಸಿಲುಕಿದೆ. ಈ ಹೆಮ್ಮಾರಿ ವಿರುದ್ಧ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

# ಸಾಕು ಪ್ರಾಣಿಗಳಲ್ಲಿಯೂ ಕೊರೊನಾ ಆತಂಕ :
ಡೆಡ್ಲಿ ಕೋವಿಡ್-19 ಕೇಂದ್ರ ಬಿಂದು ಎನಿಸಿರುವ ನ್ಯೂಯಾರ್ಕ್‍ನಲ್ಲಿ ಎರಡು ಸಾಕು ಬೆಕ್ಕುಗಳಿಗೂ ಕೊರೊನಾ ಸೋಂಕು ತಗುಲಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಇದು ಇತರ ಪ್ರಾಣಿಗಳಿಗೂ ಹಬ್ಬುವ ಸಾಧ್ಯತೆ ಬಗ್ಗೆ ಅಮೆರಿಕನ್ನರು ಆತಂಕಗೊಂಡಿದ್ದಾರೆ.  ಈ ಹಿಂದೆ ಆಮೆರಿಕ ನ್ಯೂಯಾರ್ಕ್ ಮೃಗಾಲಯದ ಹುಲಿ ಮತ್ತು ಸಿಂಹಗಳಿಗೂ ಕೊರೊನಾ ಸೋಂಕು ಕಂಡುಬಂದಿತ್ತು.

Facebook Comments

Sri Raghav

Admin