ನೀರವ್ ಮೋದಿ ಅರ್ಜಿ ವಜಾಗೊಳಿಸಿದ ಅಮೆರಿಕಾ ಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಅ.19-ಕೋಟ್ಯಂತರ ರೂ. ವಂಚನೆ ಆರೋಪಕ್ಕೆ ಗುರಿಯಾಗಿರುವ ಭಾರತೀಯ ಮೂಲದ ಡೈಮಂಡ್ ವ್ಯಾಪಾರಿ ನೀರವ್ ಮೋದಿ ಹಾಗೂ ಆತನ ಇಬ್ಬರು ಸಹಚರರು ತಮ್ಮ ವಿರುದ್ಧದ ಆರೋಪ ಕೈಬಿಡುವಂತೆ ಮಾಡಿಕೊಂಡಿದ್ದ ಮನವಿಯನ್ನು ಅಮೆರಿಕಾ ನ್ಯಾಯಾಲಯ ವಜಾಗೊಳಿಸಿದೆ.

ಈ ಹಿಂದೆ ನೀರವ್ ಮೋದಿ ಒಡೆತನದಲ್ಲಿದ್ದ ಫೈರ್‍ಸ್ಟಾರ್ ಡೈಮಂಡ್, ಫ್ಯಾಂಟಸಿ ಇಂಕ್ ಹಾಗೂ ಝಾಫೆ ಸಂಸ್ಥೆಗಳ ಟ್ರಸ್ಟಿಗಳು ಮೋದಿ ಕೋಟ್ಯಂತರ ರೂ. ವಂಚಿಸಿದ್ದಾರೆ ಎಂದು ನ್ಯೂಯಾರ್ಕ್ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ನೀರವ್ ಹಾಗೂ ಆತನ ಸಹಚರರಾದ ಮೀಹಿರ್ ಬನ್ಸಾಲ್, ಅಜಯ್ ಗಾಂಧಿ ಅವರುಗಳು ಕೋಟ್ಯಂತರ ರೂ. ವಂಚಿಸಿದ್ದು ಅವರಿಂದ 1.5 ಮಿಲಿಯನ್ ಅಮೆರಿಕನ್ ಡಾಲರ್ ಪರಿಹಾರ ಧನ ಕೊಡಿಸುವಂತೆ ರಿಚರ್ಡ್ ಲೇವಿನ್ ವಾದಿಸಿದ್ದರು.

ಹೀಗಾಗಿ ನ್ಯಾಯಾಲಯ ಮೋದಿ ಹಾಗೂ ಆತನ ಇಬ್ಬರು ಸಹಚರರಿಗೆ ನೋಟಿಸ್ ಜಾರಿ ಮಾಡಿತ್ತು. ಭಾರತದಲ್ಲಿ ಪಿಎನ್‍ಬಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ ಪ್ರಸ್ತುತ ಇಂಗ್ಲೇಂಡ್‍ನಲ್ಲಿ ಜೈಲುವಾಸ ಅನುಭವಿಸುತ್ತಿರುವ ಮೋದಿ ಮತ್ತು ಆತನ ಸಹಚರರು ತಮ್ಮ ವಿರುದ್ಧದ ಆರೋಪದಿಂದ ಮುಕ್ತಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

ಆದರೆ, ಮೋದಿ ಮತ್ತು ಆತನ ಸಹಚರರ ಮನವಿಯನ್ನು ವಜಾಗೊಳಿಸಿರುವ ನ್ಯಾಯಾಲಯ ಆಗಿರುವ ನಷ್ಟ ಭರಿಸಿಕೊಡುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.

Facebook Comments