ಡಿಜೆಹಳ್ಳಿಗೆ ಬೆಂಕಿಯಿಟ್ಟ ಪುಂಡರ ವಿರುದ್ಧ ಯುಎಪಿಎ ಬ್ರಹ್ಮಾಸ್ತ್ರ ಪ್ರಯೋಗ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.24- ನಗರದ ಡಿಜೆಹಳ್ಳಿ ಹಾಗೂ ಕೆಜಿಹಳ್ಳಿಯಲ್ಲಿ ನಡೆದ ಗಲಭೆ ಸಂಬಂಧ ಮೂವರು ಆರೋಪಿಗಳು ಉಗ್ರರ ಜೊತೆ ಸಂಪರ್ಕ ಇಟ್ಟುಕೊಂಡ ಹಿನ್ನಲೆಯಲ್ಲಿ ಅಪರಾಧ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯ ಬ್ರಹ್ಮಾಸ್ತ್ರ ಬಳಸಲು ಸರ್ಕಾರ ಮುಂದಾಗಿದೆ.

ಬಂಧನಕ್ಕೊಳಪಟ್ಟಿರುವ ಎಸ್‍ಡಿಪಿಐ ಕಾರ್ಯಕರ್ತರ ಸಮೀವುದ್ದೀನ್, ಡಿಚ್ಚಿ ಮುಬಾರಕ್ ಹಾಗೂ ಜೈದ್ ಎಂಬುವರು ಉಗ್ರರ ಜೊತೆ ನಿರಂತರವಾಗಿ ಸಂಪರ್ಕ ಹೊಂದಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.

ಇದೊಂದು ಗಂಭೀರ ಸ್ವರೂಪ ಹಾಗೂ ರಾಷ್ಟ್ರದ ಭದ್ರತೆಗೆ ಧಕ್ಕೆ ಉಂಟು ಮಾಡುವ ಪ್ರಕರಣವಾಗಿರುವುದರಿಂದ ಮೂವರು ಶಂಕಿತರು ಸೇರಿದಂತೆ ಪ್ರಸ್ತುತ ಸಿಸಿಬಿ ವಶದಲ್ಲಿರುವ 30ಕ್ಕೂ ಹೆಚ್ಚು ಶಂಕಿತರ ವಿರುದ್ಧವೂ ಯುಎಪಿಎ ಕಾಯ್ದೆಯಡಿ ದೂರು ದಾಖಲಾಗಲಿದೆ.

ಡಿಜೆಹಳ್ಳಿ ಪೊಲೀಸ್ ಠಾಣೆಗೆ ಬೆಂಕಿಹಚ್ಚಿದ್ದು, ಶಸ್ತ್ರಾಸ್ತ್ರ ಅಪಹರಣ ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿ, ವಾಹನಗಳನ್ನು ಧ್ವಂಸಗೊಳಿಸಿರುವುದು ಉಗ್ರಗಾಮಿ ಚಟುವಟಿಕೆಗಳಷ್ಟೇ ಸಮಾನ ಪ್ರಕರಣ ಎಂದು ಸರ್ಕಾರ ಪರಿಗಣಿಸಿದೆ.

ಹೀಗಾಗಿ ಸಿಸಿಬಿ ವಶದಲ್ಲಿದ್ದು ವಿಚಾರಣೆ ವೇಳೆ ಉಗ್ರಗಾಮಿ ಸಂಘಟನೆಗಳು ಮತ್ತು ಉಗ್ರರ ಜೊತೆ ಸಂಪರ್ಕ ಇಟ್ಟುಕೊಂಡಿರುವ ಶಂಕಿತರ ಮೇಲೆ ಯುಎಪಿಎ ಕಾಯ್ದೆಯಡಿ ದೂರು ದಾಖಲಿಸುವಂತೆ ಗೃಹ ಇಲಾಖೆ ಸೂಚನೆ ಕೊಟ್ಟಿದೆ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ಯುಎಪಿಎ ಕಾಯ್ದೆಯನ್ನು ಉಗ್ರಗಾಮಿ ಸಂಘಟನೆ, ಉಗ್ರರು, ವಿಧ್ವಂಸಕ ಕೃತ್ಯ ನಡೆಸುವವರು, ಬಾಂಬ್ ಸೋಟ ಸೇರಿದಂತೆ ಭಯೋತ್ಪಾದನೆ ಚಟುವಟಿಕೆ ನಡೆಸುವವರ ವಿರುದ್ಧ ಈ ಅಸ್ತ್ರವನ್ನು ಬಳಸುತ್ತಾರೆ.

ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವುದು ಕೂಡ ಭಯೋತ್ಪಾದನೆ ಚಟುವಟಿಕೆಯಷ್ಟೇ ಗಂಭೀರ ಸ್ವರೂಪದ ಪ್ರಕರಣವಾಗಿದೆ. ಈಗಾಗಲೇ ಠಾಣೆ ಧ್ವಂಸ, ಶಸ್ತ್ರಾಸ್ತ್ರ ಅಪಹರಣ ಮಾಡಿರುವುದು ಹಾಗೂ ಸಾರ್ವಜನಿಕರ ಆಸ್ತಿ ನಷ್ಟ ಮಾಡಿರುವ ಕಾರಣ ಹಳೆ ಎಫ್‍ಐಆರ್‍ಗೆ ಹೊಸ ಸೆಕ್ಷನ್ ದಾಖಲಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

1964 ಯುಎಪಿಎ ಕಾಯ್ದೆ ಪ್ರಕಾರ ಸಾರ್ವಜನಿಕರನ್ನು ಭಯಭೀತಗೊಳಿಸಬೇಕೆಂಬ ಏಕೈಕ ಕಾರಣಕ್ಕಾಗಿ ದುಷ್ಕರ್ಮಿಗಳು ಈ ಕೃತ್ಯ ಎಸಗಿರುವ ಕಾರಣ ವಶದಲ್ಲಿರುವ ಬಹುತೇಕರ ಮೇಲೆ ಈ ಅಸ್ತ್ರ ಬಳಕೆಯಾಗಲಿದೆ.

# ಜಾಮೀನು ಕಷ್ಟ:
ಒಂದು ವೇಳೆ ವಶದಲ್ಲಿರುವ ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆ ಜಾರಿಯಾದರೆ ಕನಿಷ್ಟಪಕ್ಷ ಒಂದು ವರ್ಷ ನ್ಯಾಯಾಲಯದಿಂದ ಜಾಮೀನು ಸಿಗುವುದು ಕಷ್ಟ. ಹೀಗಾಗಿ ಒಂದು ವರ್ಷದವರೆಗೂ ಶ್ರೀಕೃಷ್ಣನ ಜನ್ಮಸ್ಥಳವೇ ಖಾಯಂ ವಾಸಸ್ಥಾನವಾಗಲಿದೆ.

ಜೊತೆಗೆ ಈ ಪ್ರಕರಣದಲ್ಲಿ ತನಿಖಾಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ಇರುವುದರಿಂದ ಮೇಲಕಾರಿಗಳಾಗಲಿ ಇಲ್ಲವೇ ಯಾರೊಬ್ಬರೂ ಕೂಡ ಪ್ರಭಾವ ಬೀರುವ ಸಾಧ್ಯತೆಗಳು ಇಲ್ಲ. ಅಲ್ಲದೆ ಆರೋಪಿಗಳಿಗೆ ಜಾಮೀನು ನೀಡಬೇಕಾದರೆ ನ್ಯಾಯಾಲಯ ಸರ್ಕಾರದ ಪರ ಅಭಿಯೋಜಕರ ಅಭಿಪ್ರಾಯವನ್ನು ಪಡೆದೇ ತೀರ್ಮಾನಿಸುತ್ತದೆ.

ಡಿಜೆಹಳ್ಳಿ ಹಾಗೂ ಕೆಜಿಹಳ್ಳಿ ಗಲಭೆ ಪ್ರಕರಣದಲ್ಲಿ ಬಂತರಾಗಿರುವವರು ರಾಷ್ಟ್ರದ ಭದ್ರತೆ, ಏಕತೆಗೆ ಹಾಗೂ ಸಾರ್ವಭೌತ್ವಕ್ಕೆ ಧಕ್ಕೆ ತಂದಿರುವುದು ಹಾಗೂ ಉಗ್ರಗಾಮಿ ಸಂಘಟನೆಗಳ ಜೊತೆ ಸಂಪರ್ಕದಲ್ಲಿದ್ದು, ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗಿದೆ.

ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಇದೇ ಮಾಹಿತಿಯನ್ನು ಸರ್ಕಾರಕ್ಕೆ ಮಾಹಿತಿ ನೀಡಿದ್ದು, ವಶದಲ್ಲಿರುವ ಆರೋಪಿಗಳ ಹಿನ್ನೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಭಾವ ಬೀರುವಷ್ಟು ಸಂಪರ್ಕ ಹೊಂದಿದ್ದಾರೆ ಎಂಬುದನ್ನು ಪತ್ತೆ ಮಾಡಿದ್ದಾರೆ.

ನಿಷೇತ ಅಲ್-ಹಿಂದ್ ಹಾಗೂ ಐಸಿಸ್ ಮತ್ತು ಪಾಕ್ ಮೂಲದ ಕೆಲವು ಉಗ್ರಗಾಮಿ ಸಂಘಟನೆಗಳ ಜೊತೆ ಸಂಪರ್ಕ ಇಟ್ಟುಕೊಂಡು ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿರುವುದು ಸಹ ಬೆಳಕಿಗೆ ಬಂದಿದೆ.
ಹೀಗಾಗಿ ಇವರೆಲ್ಲರ ಮೇಲೆ ಸರ್ಕಾರ ಯುಎಪಿಎ ಬ್ರಹ್ಮಾಸ್ತ್ರ ಬಳಸಿ ಎಡೆಮುರಿ ಕಟ್ಟಲು ಮುಂದಾಗಿದೆ.

Facebook Comments

Sri Raghav

Admin