ಎನ್‍ಸಿಪಿ-ಕಾಂಗ್ರೆಸ್ ಜತೆ ಶಿವಸೇನೆ ಮೈತ್ರಿ : ಭುಗಿಲೆದ್ದ ಆಂತರಿಕ ಭಿನ್ನಮತ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ನ.19- ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ ಒಂದು ತಿಂಗಳಾಗುತ್ತಾ ಬಂದಿದ್ದರೂ ಇನ್ನೂ ಅಸ್ಪಷ್ಟತೆ ಮುಂದುವರೆದಿದೆ. ಸರ್ಕಾರ ರಚನೆಯ ಡ್ರಾಮಾ ಮುಂದುವರೆದಿರುವಂತೆ ಕಾಂಗ್ರೆಸ್ ಮತ್ತು ಎನ್‍ಸಿಪಿ ಜೊತೆಗೆ ಕೈ ಜೋಡಿಸುವ ನಿರ್ಧಾರವನ್ನು ಉದ್ಧವ್ ಠಾಕ್ರೆ ಘೋಷಿಸಿದಾಗ ಪಕ್ಷದಲ್ಲಿನ ಬಹಳಷ್ಟು ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವ ಸಂಗತಿ ಬಹಿರಂಗಗೊಂಡಿದೆ.

ಈ ರೀತಿಯ ಭಾರಿ ಅಸಮಾಧಾನದಿಂದಾಗಿ ಶಾಸಕರು ತಮ್ಮ ಮನೆಗಳಿಗೆ ಮರಳಲು ಅನುಮತಿ ನೀಡಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಮಹಾರಾಷ್ಟ್ರ ಸರ್ಕಾರ ರಚಿಸಲು ರಾಜ್ಯಪಾಲರ ಆಹ್ವಾನವನ್ನು ಬಿಜೆಪಿ ನಿರಾಕರಿಸಿದ ನಂತರ ಶಿವಸೇನೆಯ ಎಲ್ಲಾ ಶಾಸಕರನ್ನು ಹೋಟೆಲ್‍ವೊಂದಕ್ಕೆ ರವಾನಿಸಲಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್, ಎನ್‍ಸಿಪಿ ಜತೆ ಸೇರಿ ಸರ್ಕಾರ ರಚಿಸುವ ಪಕ್ಷದ ಮುಖಂಡರ ವಿರುದ್ಧ ನಾಯಕರು ಗಂಭೀರವಾಗಿ ಕಳವಳ ವ್ಯಕ್ತಪಡಿಸಿದ್ದರು.

ಆರಂಭದಲ್ಲಿ ಈ ಭಿನ್ನಾಭಿಪ್ರಾಯ ಸಣ್ಣ ಪ್ರಮಾಣದಲ್ಲಿತ್ತು. ಆದರೆ, ದಿನಗಳು ಕಳೆದಂತೆ ಹೆಚ್ಚಾಗುತ್ತಾ ಸಾಗಿದ್ದ ಕಾರಣ ಶಾಸಕರನ್ನು ತಮ್ಮ ಮನೆಗಳಿಗೆ ಕಳುಹಿಸಲು ಪಕ್ಷದ ನಾಯಕರು ತೀರ್ಮಾನಿಸಿದರು ಎಂದು ಶಿವಸೇನೆಯೊಳಗಿನ ಮುಖಂಡರು ಹೇಳಿದ್ದಾರೆ. ಕುದುರೆ ವ್ಯಾಪಾರ ಭೀತಿಯ ಹಿನ್ನೆಲೆಯಲ್ಲಿ 56 ಶಿವಸೇನೆ ಶಾಸಕರು ಪಶ್ಟಿಮ ಮುಂಬೈಯ ರಿಟ್ರೀಟ್ ಹೊಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದರು.

ಈ ಪೈಕಿ 40ಕ್ಕೂ ಹೆಚ್ಚು ಶಾಸಕರು ಬಂಡಾಯ ಏಳುವ ಸ್ಥಿತಿಯಲ್ಲಿದ್ದು, ವಿರೋಧಿಗಳೊಂದಿಗೆ ಹೇಗೆ ಕೈಜೋಡಿಸುವುದು ಎಂದು ವರಿಷ್ಠರನ್ನು ಪ್ರಶ್ನಿಸಿದ್ದಾರೆ. ಇವರೆಲ್ಲರೂ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಬೇಕಿತ್ತು ಎಂಬ ಬಲವಾದ ಅಭಿಪ್ರಾಯ ಹೊಂದಿದ್ದರು ಎನ್ನಲಾಗಿದೆ.

ಈ ಮಧ್ಯೆ ಶಿವಸೇನೆಯೊಂದಿಗೆ ಕೈ ಜೋಡಿಸಲು ಕಾಂಗ್ರೆಸ್, ಎನ್ ಸಿಪಿ ನಿರ್ಧರಿಸಿಲ್ಲ ಉದ್ದವ್ ಠಾಕ್ರೆ ನೇತೃತ್ವದಲ್ಲಿನ ಶಿವಸೇನೆಯ ಆಂತರಿಕ ಕಚ್ಚಾಟ ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಒಟ್ಟಾರೆ ಅಸ್ಪಷ್ಟ ಚಿತ್ರಣದ ನಡುವೆಯೂ ಮಹಾರಾಷ್ಟ್ರದ ಮುಂದಿನ ರಾಜಕೀಯ ಬೆಳವಣಿಗೆ ಕುತೂಹಲಕಾರಿಯಾಗಿದೆ.

Facebook Comments