‘ಟ್ರಂಪ್ ಭೇಟಿಯಿಂದ ಭಾರತ ಸೂಪರ್ ಪವರ್ ಆಗಲ್ಲ’ : ಉದ್ಧವ್ ಠಾಕ್ರೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ/ಭುವನೇಶ್ವರ, ಫೆ.23- ಅಮೆರಿಕ ಅಧ್ಯಕ್ಷ ಡೊನಾಲ್ಡ ಟ್ರಂಪ್ ಅವರ ಭಾರತ ಭೇಟಿ ಬಗ್ಗೆ ವಿವಿಧ ಪಕ್ಷಗಳು ತೀವ್ರ ಟೀಕೆ ವ್ಯಕ್ತಪಡಿಸಿವೆ. ಟ್ರಂಪ್ ಭೇಟಿಯಿಂದ ಭಾರತ ಸೂಪರ್ ಪವರ್ ದೇಶ ಆಗುವುದಿಲ್ಲ ಎಂದು ಟೀಕಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವ ಸೇನೆ ನಾಯಕ ಉದ್ಧವ್ ಠಾಕ್ರೆ ಭಾರತಕ್ಕೆ ಈಗ ಬೇಕಿರುವುದು ಬಂಡವಾಳ ಹೂಡಿಕೆ ಮತ್ತು ಮಾನವ ಸಂಪನ್ಮೂಲ ಹೊರತು ವಿಶ್ವದ ದೊಡ್ಡಣ್ಣನ ಭೇಟಿ ಅಲ್ಲ ಎಂದು ಟೀಕಿಸಿದ್ದಾರೆ.

ಮುಂಬೈನಲ್ಲಿ ಈ ಕುರಿತು ಹೇಳಿಕೆ ನೀಡಿರುವ ಠಾಕ್ರೆ ಟ್ರಂಪ್ ಎರಡು ದಿನಗಳ ಮಟ್ಟಿಗೆ ಭಾರತಕ್ಕೆ ಬರುತ್ತಾರೆ, ಹೋಗುತ್ತಾರೆ. ಅವರ ಈ ಭೇಟಿ ಭಾರತ ಮಹಾನ್ ಶಕ್ತಿಶಾಲಿ ದೇಶವಾಗಲು ಕಾರಣವಾಗುವುದಿಲ್ಲ. ನಮ್ಮಲ್ಲಿನ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಂಡು ಎಲ್ಲಾ ಕ್ಷೇತ್ರಗಳಲ್ಲೂ ಅಗತ್ಯವಾಗಿರುವ ಬಂಡವಾಳ ಹೂಡಿಕೆಯತ್ತ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಸಲಹೆ ಮಾಡಿದ್ದಾರೆ.

ಟ್ರಂಪ್ ಭೇಟಿ ಅಮೆರಿಕದ ಆರ್ಥಿಕತೆಗೆ ಲಾಭವೇ ಹೊರತು ನಮಗೇನೂ ಉಪಯೋಗವಿಲ್ಲ ಎಂದು ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸೇರಿದಂತೆ ಇನ್ನು ಕೆಲವು ಮುಖಂಡರು ಟೀಕಿಸಿದ್ದಾರೆ. ನಿನ್ನೆ ಭುವನೇಶ್ವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಇಬ್ಬರೂ ನಾಯಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಬ್ರಹ್ಮಣ್ಯನ್ ಸ್ವಾಮಿ, ಡೊನಾಲ್ಡï ಟ್ರಂಪ್ ಅವರು ತಮ್ಮ ದೇಶದ ಆರ್ಥಿಕತೆಯನ್ನು ಉತ್ತೇಜಿಸಲು ಭಾರತಕ್ಕೆ ಬರುತ್ತಿದ್ದಾರೆ ಹೊರತು ನಮ್ಮ ದೇಶದ ಆರ್ಥಿಕ ಲಾಭಕ್ಕಲ್ಲ. ಹೀಗಾಗಿ ಅವರು ಭಾರತಕ್ಕೆ ಬರುವುದರಿಂದ ನಮಗೆ ಯಾವುದೇ ಲಾಭವಾಗುತ್ತದೆ ಎಂದು ಅನಿಸುವುದಿಲ್ಲ ಎಂದು ಹೇಳಿದರು. ಟ್ರಂಪ್ ಭೇಟಿ ವೇಳೆ ಕೆಲವು ರಕ್ಷಣಾ ಒಪ್ಪಂದ ಏರ್ಪಡಬಹುದು.

ಅದರಿಂದ ಅವರ ದೇಶಕ್ಕೆ ಲಾಭವಿದೆ. ಅಷ್ಟಕ್ಕೂ ಅಮೆರಿಕದಿಂದ ಖರೀದಿಸುವ ರಕ್ಷಣಾ ಸಾಮಗ್ರಿಗಳಿಗೆ ನಾವು ಹಣ ಕೊಡುತ್ತೇವೆ. ಅದನ್ನು ಅವರು ಉಚಿತವಾಗಿ ನೀಡುತ್ತಿಲ್ಲ ಎಂದು ಸುಬ್ರಹ್ಮಣ್ಯ ಸ್ವಾಮಿ ತಮ್ಮದೇ ಪಕ್ಷದ ಸರ್ಕಾರವನ್ನು ಟೀಕಿಸಿದರು. ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಸೀತಾರಾಮ್ ಯೆಚೂರಿ, ಟ್ರಂಪ್ ಅವರ ಭೇಟಿಯಿಂದ ನಮಗೆ ಆತಂಕವಾಗುತ್ತಿದೆ. ಅಮೆರಿಕ ರೈತರಿಗೆ ರಿಯಾಯಿತಿ ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ ಎಂದರು.

Facebook Comments