ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಭೀತಿ, ಮಿತ್ರ ಪಕ್ಷಗಳ ಜತೆ ಉದ್ಧವ್ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಮೇ 27- ಕೊರೊನಾ ಹಾವಳಿಯಿಂದ ಸರ್ಕಾರದ ಕಾರ್ಯ ಚಟುವಟಿಕೆ ಮಂದಗತಿಯಲ್ಲಿ ಸಾಗಿರುವ ಸಂದರ್ಭದಲ್ಲೇ ಮಹಾರಾಷ್ಟ್ರದ ಮೇಲೆ ಭಾರತೀಯ ಜನತಾ ಪಕ್ಷದ ಆಪರೇಷನ್ ಕಮಲ ಆತಂಕ ಆವರಿಸಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಇತ್ತೀಚಿನ ದಿನಗಳಲ್ಲಿ ಸಮನ್ವಯದ ಕೊರತೆ ಎದುರಾಗಿದ್ದು, ಕೆಲ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಎದುರಾಗಿರುವ ಸಂದರ್ಭದಲ್ಲೇ ಬಿಜೆಪಿ ಅಖಾಡಕ್ಕೆ ಇಳಿದಿರುವುದು ಹೊಸ ರಾಜಕೀಯ ವಿದ್ಯಮಾನಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಇಂದು ಸಂಜೆ ಮಹಾವಿಕಾಸ್ ಅಗಡಿ ವೇದಿಕೆಯ ಮಿತ್ರ ಪಕ್ಷಗಳಾದ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದಾರೆ. ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿರುವ ಎನ್‍ಸಿಪಿ ನಾಯಕ ಶರದ್ ಪವಾರ್ ಸರ್ಕಾರ ಸುಭದ್ರವಾಗಿದೆ.

ಮಿತ್ರ ಪಕ್ಷಗಳ ಎಲ್ಲಾ ಶಾಸಕರು ಒಗ್ಗಟ್ಟಿನಿಂದಿದ್ದಾರೆ. ನಮ್ಮಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿ ಯಾವುದೇ ದೊಡ್ಡ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶಿವಸೇನೆಯ ನಾಯಕ ಸಂಜಯ್ ರಾವತ್ ಸಹ ಮೈತ್ರಿ ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ. ಒಂದು ವೇಳೆ ಬಿಜೆಪಿ ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿದರೂ ಯಾವುದೇ ಆತಂಕ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆರು ತಿಂಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಮತ್ತು ಕೇಂದ್ರದ ನಡುವೆ ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿದ್ದು, ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳು ಮುಂದುವರೆದಿದೆ.

ಇಂದು ಸಂಜೆ ನಡೆಯಲಿರುವ ಮೈತ್ರಿ ಪಕ್ಷಗಳ ಸಭೆಯಲ್ಲಿ ಮಹಾವಿಕಾಸ ಅಗಡಿ ವೇದಿಕೆಯನ್ನು ಮತ್ತಷ್ಟು ಬಲಪಡಿಸಲು ಠಾಕ್ರೆ ಕಾರ್ಯಕಂತ್ರ ರೂಪಿಸಿದ್ದಾರೆ.

Facebook Comments