‘ಮಹಾ’ ಸಿಎಂ ನಿವಾಸ ಸ್ಫೋಟಿಸುವುದಾಗಿ ದಾವೂದ್ ಗ್ಯಾಂಗ್‍ನಿಂದ್ ಫೋನ್ ಕರೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.7-ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರ ಮುಂಬೈನಲ್ಲಿರುವ ಮಾತೋಶ್ರೀ ನಿವಾಸವನ್ನು ಸ್ಪೋಟಿಸುವುದಾಗಿ ಕುಪ್ರಸಿದ್ಧ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್‍ನಿಂದ ಶಿವಸೇನೆ ಪರಮೋಚ್ಚ ನಾಯಕರಿಗೆ ಬೆದರಿಕೆ ಕರೆಗಳು ಬಂದಿವೆ.

ಮುಂಬೈನ ಬಾಂದ್ರಾದಲ್ಲಿರುವ ಮಾತೋಶ್ರೀ ಕಟ್ಟಡವನ್ನು ಶೀಘ್ರದಲ್ಲೇ ಬಾಂಬ್ ಮೂಲಕ ಸ್ಫೋಟಿಸಿ ವಿಧ್ವಂಸಕ ಕೃತ್ಯ ಎಸಗುವುದಾಗಿ ಡಿ-ಗ್ಯಾಂಗ್‍ನ ಸದಸ್ಯನೊಬ್ಬ ಕೆಲವು ಬಾರಿ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಬೆದರಿಕೆ ಕರೆ ಮಾಡಿದ್ದಾನೆ.

ಈ ಹಿನ್ನಲೆಯಲ್ಲಿ ಮುಂಬೈ ಕ್ರೈಂ ಬ್ರಾಂಚ್ ವಿಶೇಷ ತಂಡ ತನಿಖೆ ಆರಂಭಿಸಿದೆ. ಇದು ನಿಜವಾಗಿಯೂ ದಾವೂದ್ ಗ್ಯಾಂಗ್‍ನಿಂದ ಬಂದ ಕರೆಯೋ ಅಥವಾ ಕಿಡಿಗೇಡಿಗಳ ಕೃತ್ಯವೋ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಬೆದರಿಕೆ ಕರೆಗಳ ಜಾಡು ಪತ್ತೆಗಾಗಿ ಸ್ಥಳೀಯರ ಪೊಲೀಸರೊಂದಿಗೆ ಕ್ರೈಂ ಬ್ರಾಂಚ್ ಅಧಿಕಾರಿಗಳು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ.

ಮುಂಬೈ ಪೊಲೀಸರು ಈ ಬೆದರಿಕೆ ಕರೆಗಳನ್ನು ಲಭುವಾಗಿ ಪರಿಗಣಿಸಿಲ್ಲ. ಮಾತೋಶ್ರೀ ಕಟ್ಟಡದ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ದಾವೂದ್ ಗ್ಯಾಂಗ್‍ನ ಸದಸ್ಯನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಶನಿವಾರ ರಾತ್ರಿ 10.30ರಲ್ಲಿ ಎರಡು ಬಾರಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರಿಗೆ ಫೋನ್ ಮಾಡಿದ್ದಾನೆ. ಮುಂದಿನ ದಿನಗಳಲ್ಲಿ ನಿಮ್ಮ ಮನೆಯನ್ನು ಬಾಂಬ್ ಮೂಲಕ ಉಡಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ.

ಮಾತೋಶ್ರೀ ನಿವಾಸದ ದೂರವಾಣಿಗೆ ತಡರಾತ್ರಿ ಬಂದ ಕರೆಯನ್ನು ಟೆಲಿಫೋನ್ ಆಪರೇಟರ್ ಸ್ವೀಕರಿಸಿದ್ದಾರೆ. ಕರೆ ಮಾಡಿದ ವ್ಯಕ್ತ ತಾನು ದುಬೈನಿಂದ ಫೋನ್ ಮಾಡುತ್ತಿದ್ದೇನೆ. ದಾವೂದ್ ಇಬ್ರಾಹಿಂ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಲು ಬಯಸಿದ್ದಾರೆ. ಉದ್ಧವ್ ಅವರಿಗೆ ಫೋನ್ ಕೊಡಿ ಎಂದು ಆತನ ಹೇಳಿದ್ದಾನೆ.

ಕರೆ ಮಾಡಿದ ವ್ಯಕ್ತಿ ತಾನು ಡಿ-ಗ್ಯಾಂಗ್ ಸದಸ್ಯ ಎಂದಷ್ಟೇ ಹೇಳಿದ್ದು, ಆತನ ಹೆಸರನ್ನು ಬಹಿರಂಗಗೊಳಿಸಿಲ್ಲ. ಎರಡು ಬಾರಿ ಕರೆಗಳು ಬಂದ ನಂತರ ಮುಂಬೈನ ಬಾಂದ್ರಾದ ಕಲಾನಗರ್ ಕಾಲೋನಿಯಲ್ಲಿರುವ ಮಾತೋಶ್ರೀ ಕಟ್ಟಡಕ್ಕೆ ಭಾರೀ ಬಂದೋಬಸ್ತ್ ಮಾಡಲಾಗಿದೆ.

Facebook Comments