ಉದ್ಯೋಗದ ಹುಡುಕಾಟದಲ್ಲಿದ್ದೀರಾ..? ಹಾಗಾದರೆ ಚಾನ್ಸ್ ಮಿಸ್ ಮಾಡ್ಕೋಬೇಡಿ

ಈ ಸುದ್ದಿಯನ್ನು ಶೇರ್ ಮಾಡಿ

Udyoga--01

ಬೆಂಗಳೂರು, ಸೆ.22- ಇದೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಡಳಿತದ ವತಿಯಿಂದ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.ಸೆ.29 ಮತ್ತು 30ರಂದು ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ 200 ಸಂಸ್ಥೆಗಳು ಪಾಲ್ಗೊಳ್ಳಲಿದ್ದು, 5 ಸಾವಿರಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ ಎಂದು ನಗರದ ಜಿಲ್ಲಾಧಿಕಾರಿ ವಿಜಯ್‍ಶಂಕರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹಮ್ಮಿಕೊಳ್ಳುವ ಜನತಾ ದರ್ಶನದಲ್ಲಿ ಉದ್ಯೋಗ ಕೇಳಿಕೊಂಡು ಬರುವವರೇ ಹೆಚ್ಚು. ಹಾಗಾಗಿ ಇದೇ ಮೊದಲ ಬಾರಿಗೆ ಜಿಲ್ಲಾಡಳಿತದ ವತಿಯಿಂದ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿದ್ದೇವೆ. ಎಸ್‍ಎಸ್‍ಎಲ್‍ಸಿಯಿಂದ ಹಿಡಿದು ಡಬಲ್ ಡಿಗ್ರಿವರೆಗೂ ಉದ್ಯೋಗ ಕಲ್ಪಿಸಲಾಗುವುದು ಎಂದು ಹೇಳಿದರು.

ಈ ಉದ್ಯೋಗ ಮೇಳದಲ್ಲಿ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಹೇಳಿದ ಅವರು, ಜನತಾ ದರ್ಶನದಲ್ಲಿ ಅರ್ಜಿ ಸಲ್ಲಿಸಿರುವ ಮೂರು ಸಾವಿರ ಅಭ್ಯರ್ಥಿಗಳು ಮತ್ತು ಸ್ಕಿಲ್ ಡೆವಲಪ್‍ಮೆಂಟ್ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಮೊದಲ ಅವಕಾಶವಿರುತ್ತದೆ ಎಂದರು.

ಓರಿಯೆಂಟೇಷನ್ ಪ್ರೊಗ್ರಾಂ ಹಮ್ಮಿಕೊಂಡು ಉದ್ಯೋಗಕ್ಕೆ ಇಂಟರ್‍ವ್ಯೂಗೆ ಹೇಗೆ ಸಿದ್ಧತೆ ಮಾಡಿಕೊಳ್ಳುವುದು, ಯಾರ ಜತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನೆಲ್ಲ ತಿಳಿಸಿಕೊಡಲಾಗುವುದು. ಇನ್ಫೋಸಿಸ್, ಶಾಹಿ ಎಂಟರ್‍ಪ್ರೈಸಸ್, ವಿವಿಧ ಬ್ಯಾಂಕ್‍ಗಳು ಸೇರಿದಂತೆ 200 ಕಂಪೆನಿಗಳು ಭಾಗಿಯಾಗಲಿವೆ. 10 ರಿಂದ 15 ಸಾವಿರ ಉದ್ಯೋಗಿಗಳು ಪಾಲ್ಗೊಳ್ಳುವರು.

ಕಂದಾಯ ಸಚಿವರು ಉದ್ಯೋಗ ಮೇಳದ ನೇತೃತ್ವ ವಹಿಸಲಿದ್ದು, ಈಗಾಗಲೇ ವಿವಿಧ ಇಲಾಖೆಗಳ ಜತೆ ಸಭೆ ನಡೆಸಲಾಗಿದೆ. ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಭದ್ರತೆ, ತಿಂಡಿ-ಊಟದ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು 29ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟಿಸಲಿದ್ದಾರೆ ಎಂದು ವಿಜಯ್‍ಶಂಕರ್ ತಿಳಿಸಿದರು.

Facebook Comments

Sri Raghav

Admin

Comments are closed.