ಸಾರಿಗೆ ಸಂಕಟದ ನಡುವೆಯೇ ಯುಗಾದಿ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಯುಗಾ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ವರಕವಿ ಬೇಂದ್ರೆಯವರ ಈ ಸಾಲುಗಳು ಸದಾ ಹಚ್ಚ ಹಸಿರು ಯಾಕೆಂದರೆ ಯುಗಾದಿ ಹಬ್ಬದ ಬಗ್ಗೆ ವರ್ಣಿಸಿರುವ ಈ ಕವಿತೆಯ ಒಂದೊಂದು ಅಕ್ಷರಗಳು ಬಲು ರೋಮಾಂಚನ. ಯುಗಾದಿ ಹಬ್ಬವೆಂದರೆ ಎಲ್ಲರಿಗೂ ಅದೊಂದು ಹೊಸ ವರ್ಷ ಮೈಗೆ ಎಣ್ಣೆ ಸ್ನಾನ ಮಾಡಿ ಬೇವು ಬೆಲ್ಲ ತಿಂದು ಹೋಳಿಗೆಯ ರುಚಿಯನ್ನು ಸವಿಯಲು ಇಡೀ ಕನ್ನಡ ನಾಡು ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದರೆ ದುರಾದೃಷ್ಟವಶಾತ್ ಸಾರಿಗೆ ನೌಕರರ ಕುಟುಂಬಗಳಿಗೆ ಮಾತ್ರ ಕತ್ತಲಿನ ಮೌನ ಆವರಿಸಿಬಿಟ್ಟಿದೆ.

ಆರನೇ ವೇತನ ಪರಿಷ್ಕರಣೆಗೆ ಸರ್ಕಾರಕ್ಕೆ ಬೇಡಿಕೆ ಮುಂದಿಟ್ಟು ಕಳೆದ 6 ದಿನಗಳಿಂದ ಮುಷ್ಕರದಲ್ಲಿ ನಿರತರಾಗಿರುವ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿಯ ಒಂದು ಲಕ್ಷದ ಮೂವತ್ತು ಸಾವಿರ ಸಾರಿಗೆ ನೌಕರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಅಚ್ಚರಿಯ ಸಂಗತಿ ಎಂದರೆ ಇದರ ನೇತೃತ್ವವನ್ನು ರೈತಪರ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ವಹಿಸಿ ಕೊಂಡು ಸಾರಿಗೆ ನೌಕರರಿಗೆ ಬೆಂಬಲ ನೀಡುತ್ತಿದ್ದಾರೆ.

ಸಾರಿಗೆ ನೌಕರರ ಮುಷ್ಕರ ನಮ್ಮ ಸರ್ಕಾರಗಳಿಗೆ ಹೊಸದೇನಲ್ಲ. ನಿಗಮದ ಅಡಿಯಲ್ಲಿ ಬರುವ ನೌಕರರ ವೇತನ ಪರಿಷ್ಕರಣೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕೈಗಾರಿಕಾ ಕಾಯ್ದೆಯ ಪ್ರಕಾರ ನೌಕರರ ಒಕ್ಕೂಟ, ಸಾರಿಗೆ ಇಲಾಖೆಯ ಮುಖ್ಯ ಕಾರ್ಯದರ್ಶಿ ಹಾಗು ಅಧಿಕಾರಿಗಳ ಸಮ್ಮತಿಯಲ್ಲಿ ಒಡಂಬಡಿಕೆಯ ಪತ್ರವನ್ನು ರಚಿಸಿ ಅದರ ಪ್ರಕಾರ ಸಾರಿಗೆ ನೌಕರರ ವೇತನ ಗೊತ್ತು ಮಾಡಲಾಗುತ್ತಿತ್ತು.

ಅದರ ಹಿನ್ನೆಲೆ ನೋಡುವುದಾದರೆ 2008 ರಲ್ಲಿ 5%, 2012ರಲ್ಲಿ 10% ವೇತನವನ್ನು ಹೆಚ್ಚಳ ಮಾಡಲಾಗಿತ್ತು 2016ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ 12.5% ಹೆಚ್ಚಳ ಮಾಡಿದ್ದರು.ಇದರ ಮುಂದುವರಿದ ಭಾಗವಾಗಿ 2020 ರಲ್ಲಿ ಆಗಬೇಕಿದ್ದ ವೇತನದ ಒಡಂಬಂಡಿಕೆ ಕೊರೊನಾ ಕಾರಣದಿಂದ ನೆನೆಗುದಿಗೆ ಬಿದ್ದಿತ್ತು. ಅನಂತರ ಕಳೆದ ವರ್ಷ ಡಿಸೆಂಬರ್‍ನಲ್ಲಿ ಸಾರಿಗೆ ನೌಕರರು ಹತ್ತು ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ಕೈಗೊಂಡಾಗ ಉಪ ಮುಖ್ಯಮಂತ್ರಿ ಲಕ್ಷ ್ಮಣ ಸವದಿ ಮೂರು ತಿಂಗಳು ಕಾಲಾವಕಾಶ ನೀಡಿ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆಂದು ಆಶ್ವಾಸನೆ ನೀಡಿ ಸಮಿತಿಯನ್ನು ರಚನೆ ಮಾಡಿ ಮುಷ್ಕರ ನಿರತರನ್ನು ಮನವೊಲಿಸಿದ್ದರು. ಅದರಲ್ಲಿ ಪ್ರಮುಖವಾಗಿ ಕೆಲವು ಸಣ್ಣ ಪುಟ್ಟ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದರು.

ದುರ್ದೈವದ ಸಂಗತಿ ಎಂದರೆ ಇವೆಲ್ಲವು ಸಾರಿಗೆ ನೌಕರರ ಬೇಡಿಕೆಗಳು ಎನ್ನುವ ಬದಲಾಗಿ ಸಮಸ್ಯೆಗಳು ಎಂದರೆ ತಪ್ಪಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಹಗಲು ರಾತ್ರಿ ನಿದ್ದೆ ಗೆಟ್ಟು ಪ್ರಾಣವನ್ನು ಪಣಕ್ಕಿಟ್ಟು ಪ್ರಯಾಣಿಕರಿಗೆ ಸೇವೆ ನೀಡುವ ಸಾರಿಗೆ ನೌಕರರಿಗೆ ಅನೇಕ ಮೂಲಭೂತ ಸಮಸ್ಯೆಗಳಿವೆ.ಆದ್ದರಿಂದ ಇವರ ಸಮಸ್ಯೆಗಳನ್ನು ಬಗೆಹರಿಸುವುದು ಅಷ್ಟೊಂದು ಸುಲಭದ ಮಾತಲ್ಲ.

ಕರ್ನಾಟಕ ಸರ್ಕಾರದಲ್ಲಿ ಒಟ್ಟು 72 ನಿಗಮಗಳಿವೆ ಅದರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಕೂಡ ಒಂದು ಅದರಲ್ಲೂ ಮತ್ತೊಂದು ವಿಶೇಷತೆಯೆಂದರೆ ಅತಿ ಕಡಿಮೆ ಸಂಬಳ ತೆಗೆದುಕೊಳ್ಳುವ ದೌರ್ಭಾಗ್ಯವಂತರೆಂದರೆ ಅದು ಸಾರಿಗೆ ನೌಕರರು. ಇವರಿಗೆ ಸರಿಯಾದಂತಹ ವೈದ್ಯಕೀಯ ಸೌಲಭ್ಯವಿಲ್ಲ ಇನ್ನು ವರ್ಗಾವಣೆಯಂತು ಕನಸಿನ ಮಾತು ಈಶಾನ್ಯ, ವಾಯುವ್ಯ , ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಹೀಗೆ ನಾಲ್ಕು ನಿಗಮಗಳಿದ್ದು ಬರೀ ಬಿಎಂಟಿಸಿಯಲ್ಲಾ ಮೂವತ್ತಾರು ಸಾವಿರ ನೌಕರರಿದ್ದಾರೆ. ಇಷ್ಟು ಜನರಲ್ಲಿ ವರ್ಗಾವಣೆಗೆ ಅವಕಾಶ ಕೊಟ್ಟಿರುವುದು ಕೇವಲ 2% ಅಂದರೆ ಆ ಭಾಗ್ಯವಂತರ ಸಂಖ್ಯೆ ಕೇವಲ 720 ಮಾತ್ರ.

ಅದರಲ್ಲೂ ಮತ್ತೊಂದು ನಿಬಂಧನೆ ಏನೆಂದರೆ ಕಡ್ಡಾಯವಾಗಿ ಹತ್ತು ವರ್ಷ ಒಂದೇ ಕಡೆ ಸೇವೆಗೈದಿರ ಬೇಕು ಇನ್ನು ಪ್ರಯಾಣದ ಅವಧಿಯಲ್ಲಿ ಯಾರಾದರೂ ಪ್ರಯಾಣದ ಚೀಟಿ ತೆಗೆದುಕೊಳ್ಳದೇ ಇದ್ದರೆ ಪ್ರಯಾಣಿಕರಿಗಷ್ಟೇ ದಂಡ ವಿಧಿಸದೇ ನಿರ್ವಾಹಕರಿಗೂ ಸಹ ದಂಡ ವಿಧಿಸಲಾಗುತ್ತದೆ ಕೆಲವೊಮ್ಮೆ ಅಮಾನತು ಗೊಳಿಸಲಾಗುತ್ತದೆ. ಅದೆಲ್ಲ ಅಧಿಕಾರಿಗಳ ವಿವೇಚನೆಗೆ ಬಿಟ್ಟ ವಿಚಾರ.

ಏನಾದರು ಕೌಟುಂಬಿಕ ಸಮಸ್ಯೆಗಳು ಬಂದಾಗ ತುರ್ತಾಗಿ ರಜೆ ಪಡೆದುಕೊಳ್ಳಲು ಮೇಲಾಧಿಕಾರಿಗಳಿಗೆ ಒಂದು ದಿನಕ್ಕೆ ನೂರು ರೂಪಾಯಿ ನೀಡಬೇಕು ಗ್ರಹಚಾರ ಕೆಟ್ಟು ವಾರಗಟ್ಟಲೇ ರಜೆ ಮಾಡಿಬಿಟ್ಟರೆ ಅದಕ್ಕೂ ದಂಡ ಕಟ್ಟಬೇಕು ಬಸ್ಸಿನ ಮಿರರ್ ಮುರಿದು ಹೋದರೆ ಕಿಟಕಿಯ ಗಾಜು ಹೊಡೆದು ಹೋದರೂ ದಂಡ. ಬಸ್ ನಿಲ್ದಾಣದಲ್ಲಿ ಕೆಲವೊಮ್ಮೆ ಅನಿವಾರ್ಯವಾಗಿ ಬಸ್ ನಿಲ್ಲಿಸದೇ ಹೋದರೆ ಸಾರಥಿಯಿಂದ ದಂಡ.

ಒಟ್ಟಾರೆ ಒಂದೇ ಮಾತಿನಲ್ಲಿ ಹೇಳುವುದಾದರೆ ಬರುವ ಸಂಬಳಕ್ಕಿಂತ ಕಟ್ಟುವ ದಂಡವೇ ಅಧಿಕ, ಇದು ಎಷ್ಟೋ ನಿರ್ವಾಹಕರ ಅಳಲು ಕೂಡ. ಸಾರಿಗೆ ನೌಕರರ ಅಧಿಕಾರಿಗಳ ವರ್ಗ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ ಯಾಕೆಂದರೆ ಅವರಿಗೆ ಕೈ ತುಂಬಾ ಸಂಬಳ ಸಿಗುತ್ತಿದೆ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುತ್ತಿವೆ ಚಳಿ ಗಾಳಿ ಮಳೆ ಎನ್ನದೇ ಕರ್ತವ್ಯ ಮುಗಿಸಿಕೊಂಡು ರಾತ್ರಿ ಹೊತ್ತು ಹೆಸರಘಟ್ಟ ಚಿಕ್ಕಬಾಣಾವರ ನಿರ್ಜನ ಪ್ರದೇಶದಲ್ಲಿ ಬಸ್ಸನ್ನು ನಿಲ್ಲಿಸಿ ಕಳ್ಳಕಾಕರ ಭಯದಲ್ಲಿ ಸೊಳ್ಳೆ ಕಚ್ಚಿಸಿಕೊಂಡು ನಿದ್ರಿಸುವ ಇವರ ಬಾದೆ ಸರ್ಕಾರಕ್ಕೆ ಮತ್ತು ಅಧಿಕಾರಿಗಳ ವರ್ಗಕ್ಕೆ ಅರ್ಥವಾಗುವುದಾದರೂ ಹೇಗೆ..? ಒಳಗೊಳಗೆ ಮಾಡಬಾರದ ಭ್ರಷ್ಟಾಚಾರವೆನ್ನೆಲ್ಲಾ ಮಾಡಿ ಸಾರಿಗೆ ಇಲಾಖೆ ಈಗ ನಷ್ಟದಲ್ಲಿ ನಡೆಯುತ್ತಿದೆ.

ಸಂಬಳ ನೀಡುವುದು ಕಷ್ಟವಾಗುತ್ತಿದೆ ಎಂದು ಸರ್ಕಾರ ಅಧಿಕಾರಿಗಳ ಮೂಲಕ ಉದಾರವಾಗಿ ಹೇಳಿಸಿಬಿಟ್ಟರೆ ಇದಕ್ಕೆ ನೌಕರರು ಕಾರಣವ..! ಮಾರ್ಕೊಪೊ ಲೋ , ಐಶರ್ ಸ್ಕ್ಯಾನಿಯ ಕಂಪನಿಯ ಬಸ್ಸುಗಳ ಪ್ರಕರಣಗಳು ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿರುವುದಾದರೂ ಭ್ರಷ್ಟಾಚಾರವಲ್ಲದೇ ಮತ್ಯಾವ ಕಾರಣಕ್ಕೆ..? ಒಂದಂತು ಸತ್ಯ. ಒಂದು ಕಾಲದಲ್ಲಿ ಸಾರಿಗೆ ನೌಕರರು ನಿಗಮಕ್ಕೆ ಆದಾಯ ತಂದು ಕೊಟ್ಟಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಇಂದು ಸಾವಿರಾರು ಕೋಟಿ ಆಸ್ತಿ ಸಾರಿಗೆ ನಿಗಮದ ಹೆಸರಲ್ಲಿದೆ.

ಯಶವಂತಪುರ ಶಾಂತಿನಗರ, ಮೆಜೆಸ್ಟಿಕ್ ಹೀಗೆ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಆದಾಯ ಗಳಿಸುತ್ತಿರುವ ಟಿಟಿಎಂಸಿ ಕಟ್ಟಡಗಳು ಆದ್ದರಿಂದ ಸಾರಿಗೆ ಇಲಾಖೆಯನ್ನು ಏಕ ಏಕಿ ಖಾಸಗೀಕರಣಗೊಳಿಸುವುದು ಅಷ್ಟು ಸುಲಭದ ಮಾತಲ್ಲ.

ಜೊತೆಗೆ ಖಾಸಗಿ ಸಂಸ್ಥೆಯವರು ಈ ರೀತಿಯ ಸೇವೆಯನ್ನು ಕೊಡಲು ಸಾಧ್ಯವಿಲ್ಲ ಇನ್ನು ಎಸ್ಮಾ ಜಾರಿಗೊಳಿಸಿದರೂ ಅದಕ್ಕೆ ನ್ಯಾಯಾಲಯದಲ್ಲಿ ಸಾರಿಗೆ ನೌಕರರು ಹೋರಾಟ ಮಾಡಬಹುದು ಇದಕ್ಕೆ ತೆಲಂಗಾಣ ತಮಿಳುನಾಡು ಸರ್ಕಾರಗಳು ಜಾರಿಗೊಳಿಸಿದ್ದ ಎಸ್ಮಾ ಕಾಯ್ದೆಯನ್ನು ನ್ಯಾಯಾಲಯ ಪರಿಗಣಿಸದೆ ನೌಕರರ ಪರ ಬಂದ ತೀರ್ಪುಗಲೇ ಜೀವಂತ ಸಾಕ್ಷಿ.

ಅದೇನೆ ಇರಲಿ, ಸರ್ಕಾರ ಒಣ ಪ್ರತಿಷ್ಠೆಯನ್ನು ಬಿಟ್ಟು ಸಾರಿಗೆ ನೌಕರರನ್ನು ಮಾತಿಗೆ ಕರೆದು ಇವರ ಬೇಡಿಕೆಯನ್ನು ಆಲಿಸಬೇಕು.ಆರನೇ ವೇತನ ಆಯೋಗ ಪ್ರಕಾರ ಇವರನ್ನು ಪರಿಗಣಿಸಿದರೆ ರಾಜ್ಯ ಸರ್ಕಾರ ಪ್ರತಿ ತಿಂಗಳು ನಾನೂರು ಕೋಟಿ ಹೆಚ್ಚುವರಿ ಹಣ ನೌಕರರ ಸಂಬಳಕ್ಕೆ ನೀಡಬೇಕಾಗುತ್ತದೆ ಒಂದು ವೇಳೆ 6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಲು ಸಾಧ್ಯವಾಗದಿದ್ದರೆ ಕೊರೊನಾ ಪರಿಸ್ಥಿತಿಯನ್ನು ಮುಂದಿಟ್ಟು ಹಿಂದಿನಂತೆ ನಾಲ್ಕು ವರ್ಷಗಳ ಒಡಂ ಬಡಿಕೆಯ ಸಂಪ್ರದಾಯವನ್ನು ಮುಂದುವರಿಸಿ ಬಿಸೋ ದೊಣ್ಣೆಯಿಂದ ಯಡಿಯೂರಪ್ಪನವರ ಸರ್ಕಾರ ಪಾರಾಗಿ ಸಾರ್ವಜನಿಕರಿಗೆ ಸಾರಿಗೆ ಸೇವೆ ದೊರಕು ವಂತಾಗಬೇಕು.

ಇಲ್ಲವಾದರೆ ಖಾಸಗಿ ಬಸ್ಸಿನವರ ಹಗಲು ದರೋಡೆ ನಿಲ್ಲಿಸಲು ಆ ದೇವರಿಂದಲೂ ಸಾಧ್ಯವಿಲ್ಲ. ಸಾರಿಗೆ ನೌಕರರು ಸಹ ಈ ಕರೋನ ಪರಿಸ್ಥಿತಿಯಲ್ಲಿ ಹೆಚ್ಚು ಹಠ ಸಾಧಿಸದೇ ಸರ್ಕಾರದ ಸಂಕಷ್ಟವನ್ನು ಅರ್ಥಮಾಡಿಕೊಂಡು ಜನರ ಪ್ರಯಾಣಿಕರ ಹಿತದೃಷ್ಟಿ ಯಿಂದ ಸಂಧಾನಕ್ಕೆ ಮುಂದಾಗಬೇಕು ಎಂಬುದೇ ಸಾರ್ವಜನಿಕರ ಅಭಿಲಾಷೆ.

ಮಹಾಂತೇಶ್ ಬ್ರಹ್ಮ
E-mail:-MahantheshBrahma@gmail.com

Facebook Comments