ಯುಗಾದಿ ಮೇಲೆ ಕರಾಳ ಕೊರೊನಾ ಛಾಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.12- ಈ ಬಾರಿಯ ಯುಗಾದಿಗೂ ಕೊರೊನಾ ಕರಿಛಾಯೆ ಆವರಿಸಿದೆ. ಜನರಲ್ಲಿ ಹಬ್ಬದ ಸಡಗರ ಅಷ್ಟಾಗಿ ಕಂಡುಬರುತ್ತಿಲ್ಲ. ಕಳೆದ ಬಾರಿ ಯುಗಾದಿ ಸಂದರ್ಭದಲ್ಲೇ ಕೊರೊನಾ ಕಾಣಿಸಿಕೊಂಡು ಹಬ್ಬದ ದಿನದಂದೇ ಸಂಪೂರ್ಣ ಲಾಕ್‍ಡೌನ್ ಘೋಷಣೆಯಾದ ಪರಿಣಾಮ ಜನ ದಿಗ್ಬ್ರಾಂಗತ ರಾಗಿ ಮನೆಯಲ್ಲೇ ಉಳಿಯುವಂತಾಗಿತ್ತು. ಹಬ್ಬಕ್ಕೆಂದು ಊರುಗಳಿಗೆ ತೆರಳಿದವರು ವಾಪಸ್ ಬರಲಾರದೆ ಅಲ್ಲೇ ಉಳಿದರು. ತಿಂಗಳುಗಟ್ಟಲೇ ಲಾಕ್‍ಡೌನ್ ಸಂಕಷ್ಟ ಅನುಭವಿಸಿದರು. ನಿಧಾನವಾಗಿ ಲಾಕ್‍ಡೌನ್ ತೆರವಾಗಿ ಜನಜೀವನ ಇನ್ನೇನು ಸಹಜ ಸ್ಥಿತಿಗೆ ಮರಳಿತು ಎನ್ನುವಷ್ಟರಲ್ಲೇ ಕೊರೊನಾ 2ನೇ ಅಲೆ ಅಪ್ಪಳಿಸಿದೆ. ಈ ಬಾರಿಯ ಯುಗಾದಿಗೂ ಸಂಕಷ್ಟ ತಂದಿಟ್ಟಿದೆ.

ಯುಗಾದಿಯ ಸಂಭ್ರಮಕ್ಕೆ ಮಸುಕು ಕವಿದಿದೆ. ಕೊರೊನಾ 2ನೇ ಅಲೆಯ ಅಬ್ಬರಕ್ಕೆ ಮಾರುಕಟ್ಟೆಯಲ್ಲಿ ಮಾರಾಟ ನೀರಸವಾಗಿದೆ. ಗ್ರಾಹಕರ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳು ನಿರಾಸೆಗೊಳಗಾಗಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ವ್ಯಾಪಾರ, ವಹಿವಾಟು ಅಷ್ಟಾಗಿ ನಡೆಯುತ್ತಿಲ್ಲ.

ಯುಗಾದಿ ಹಬ್ಬಕ್ಕೆ ಪ್ರತಿ ವರ್ಷದಂತೆ ಮಾರುಕಟ್ಟೆಗಳೇನೋ ತೆರೆದುಕೊಂಡಿವೆ. ಆದರೆ ಕೊರೊನಾ ಕಾರಣದಿಂದ ಅಂಗಡಿಗಳಿಗೆ ಗ್ರಾಹಕರು ಬರುವುದು ಕಡಿಮೆಯಾಗಿದೆ. ಹಬ್ಬದ ಸಂದರ್ಭದಲ್ಲಿ ಭರ್ಜರಿ ವ್ಯಾಪಾರ, ವಹಿವಾಟು ನಡೆಯುತ್ತಿತ್ತು. ಹೊಸ ವಾಹನ, ಬಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಜನ ಖರೀದಿಸುತ್ತಿದ್ದರು. ಆಕರ್ಷಕ ಆಫರ್‍ಗಳನ್ನು ಕೂಡ ಮಾರಾಟಗಾರರು ನೀಡುತ್ತಿದ್ದರು. ಆದರೆ ಏನೇ ಆಕರ್ಷಣೆ ಮಾಡಿದರೂ ಕೂಡ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ವಹಿವಾಟು ಕುಸಿದಿದೆ.

ಯುಗಾದಿ ಸಡಗರ, ಸಂಭ್ರಮ ಕ್ಷೀಣಿಸಿದೆ. ಕಳೆದ ಯುಗಾದಿ ವೇಳೆ ಕೊರೊನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಹೇರಲಾಗಿತ್ತು. ಆದರೆ ಹಬ್ಬಕ್ಕಾಗಿ ಮಾರುಕಟ್ಟೆಗಳಲ್ಲಿ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಆ ಸಂದರ್ಭದಲ್ಲಿ ಹಣ್ಣು, ಹೂವು, ತರಕಾರಿ ಮತ್ತಿತರ ಪದಾರ್ಥಗಳ ಬೆಲೆ ಏರಿಕೆಯಾಗಿತ್ತು. ಆದರೆ ಈ ಬಾರಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾದರೂ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡಿಲ್ಲ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಮಾರುಕಟ್ಟೆ ಎಂದಿನಂತೆ ತೆರೆದಿದೆ ಯಾದರೂ ಹಬ್ಬದ ಖರೀದಿಗೆ ಬರುತ್ತಿದ್ದ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ.

ಮಲ್ಲೇಶ್ವರಂ, ಗಾಂಧಿಬಜಾರ್, ಯಶವಂತ ಪುರ, ಇಂದಿರಾನಗರ, ವಿಜಯನಗರ, ಕೆ.ಆರ್.ಪುರ, ಚಿಕ್ಕಪೇಟೆ, ಶಿವಾಜಿನಗರ ಸೇರಿದಂತೆ ಎಲ್ಲ ಮಾರುಕಟ್ಟೆಗಳು ಆಕರ್ಷಕವಾಗಿ ತೆರೆದುಕೊಂಡಿದ್ದರೂ ಕೂಡ ಗ್ರಾಹಕರು ಸಂಖ್ಯೆ ವಿರಳವಾಗಿದೆ. ಹಬ್ಬಕ್ಕೆ ಅಗತ್ಯವಾದ ಮಾವು, ಬೇವು, ಹೂವು, ಹಣ್ಣು , ತರಕಾರಿ ಕೊಳ್ಳುವಲ್ಲೂ ಕೂಡ ಜನರು ನಿರಾಸಕ್ತಿ ಹೊಂದಿರುವುದು ಕಂಡುಬಂದಿದೆ.

ಸಾಮಾನ್ಯವಾಗಿ ಹಬ್ಬದ ನಾಲ್ಕೈದು ದಿನಗಳ ಮುನ್ನವೇ ಖರೀದಿಗೆ ಮುನ್ನುಗುತ್ತಿ ದ್ದರು. ಆದರೆ ಕೊರೊನಾ 2ನೇ ಅಲೆಗೆ ಜನ ಭಯಭೀತರಾದಂತೆ ಕಾಣುತ್ತಿದೆ. ಅಲ್ಲದೆ ಸಾಲು ಸಾಲು ರಜೆಯ ಹಿನ್ನೆಲೆ ಯಲ್ಲಿ ಜನರು ಊರುಗಳಿಗೆ ತೆರಳಿದ್ದರೂ ಮಾರುಕಟ್ಟೆಗಳು ಜನಜಂಗುಳಿಯಿಂದ ಕೂಡಿರಬೇಕಿತ್ತು. ಆದರೆ ಬಹುತೇಕ ಮಾರು ಕಟ್ಟೆಗಳು ಖಾಲಿ ಖಾಲಿ ಹೊಡೆಯುತ್ತಿವೆ.

ನಾಳೆ ಯುಗಾದಿ ಇದ್ದರೂ ಇಂದು ಖರೀದಿ ಭರಾಟೆ ಹೆಚ್ಚಾಗಿರಬೇಕಿತ್ತು. ಆದರೆ ಬಹುತೇಕ ಮಾರುಕಟ್ಟೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ವಹಿವಾಟು ನಡೆಯದಿರುವುದು ಕಂಡುಬಂದಿಲ್ಲ. ಸರ್ಕಾರ ಕೂಡ ಹಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಮನೆಯಿಂದ ಹೊರಬರದೆ ಇದ್ದಲ್ಲಿಯೇ ಹಬ್ಬ ಆಚರಿಸುವಂತೆ ಸೂಚಿಸಿದೆ. ಆದ್ದರಿಂದ ಜನ ಸರಳ ಹಬ್ಬದ ಆಚರಣೆಯಲ್ಲಿ ತೊಡಗಿದಂತೆ ಕಂಡುಬಂದಿದೆ.

Facebook Comments