ಸಿಎಂ ಬಿಎಸ್ವೈ ಭೇಟಿಯಾದ ಉಮೇಶ್ ಕತ್ತಿ, ನಿರಾಣಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.7- ಬಿಜೆಪಿಯ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿ ರಮೇಶ್ ಕತ್ತಿ ಹೆಸರನ್ನು ಶಿಫಾರಸು ಮಾಡಿದ್ದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕತ್ತಿ ಸಹೋದರರು ಮತ್ತು ಮಾಜಿ ಸಚಿವ ಮುರುಗೇಶ್ ನಿರಾಣಿ ಧನ್ಯವಾದ ಸಲ್ಲಿಸಿದರು.

ಬೆಳಗ್ಗೆ ವಾಯು ವಿಹಾರ ಮಾಡುತ್ತಿರುವ ವೇಳೆ ಸಿಎಂ ನಿವಾಸ ಕಾವೇರಿಗೆ ಭೇಟಿ ನೀಡಿದ ಹಿರಿಯ ಶಾಸಕ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ, ಮಾಜಿ ಸಚಿವ ಹಾಗೂ ಶಾಸಕ ಮುರುಗೇಶ್ ನಿರಾಣಿ ಪುಷ್ಪಗುಚ್ಛ ನೀಡಿ ತಮ್ಮ ಬೇಡಿಕೆ ಈಡೇರಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಮತ್ತು ಕೆಲ ಶಾಸಕರು ಭೋಜನ ಕೂಟ ಏರ್ಪಡಿಸಿ ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧ ಬಂಡಾಯದ ರಣಕಹಳೆ ಮೊಳಗಿಸಿದ್ದರು.

ಕತ್ತಿ ಸಹೋದರರ ಬಂಡಾಯಕ್ಕೆ ಕಡೆಗೂ ಪ್ರತಿಫಲ ಸಿಕ್ಕಿದ್ದು, ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್ ನೀಡುವಂತೆ ಬಿಜೆಪಿ ಕೋರ್ ಕಮಿಟಿ ಶಿಫಾರಸು ಮಾಡಿದೆ. ಜತೆಗೆ ಮುರುಗೇಶ್ ನಿರಾಣಿ ಗ್ರೂಪ್‍ಗೆ ಮಂಡ್ಯ ಜಿಲ್ಲಾ ಪಾಂಡವಪುರದ ಸಹಕಾರಿ ಸಕ್ಕರೆ ಕಾರ್ಖಾನೆ 40 ವರ್ಷದ ಅವಧಿಗೆ ಗುತ್ತಿಗೆಯೂ ಸಿಕ್ಕಿದೆ.

Facebook Comments