‘ನಮ್ಮ ದಾರಿ ನಮಗೆ, ಅವರ ದಾರಿ ಅವರಿಗೆ’ : ಅನರ್ಹ ಶಾಸಕರಿಗೆ ಚುಚ್ಚಿದ ‘ಕತ್ತಿ’

ಈ ಸುದ್ದಿಯನ್ನು ಶೇರ್ ಮಾಡಿ

ಹುಕ್ಕೇರಿ,ಸೆ.29- ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ ಎಂದು ಅನರ್ಹ ಶಾಸಕರ ಕುರಿತು ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಹೊಸ ಬಾಂಬ್ ಸಿಡಿಸಿದ್ದಾರೆ. ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜೀನಾಮೆಯಿಂದ ತೆರವಾಗಿರುವ 3 ವಿಧಾನ ಸಭಾ ಕ್ಷೇತ್ರಗಳಿಗೆ ಬಿಜೆಪಿಯವರಿಗೆ ಟಿಕೆಟ್ ಸಿಕ್ಕುತ್ತದೆ ಎಂದು ಹೇಳುವ ಮೂಲಕ ರಾಜೀನಾಮೆ ನೀಡಿ ಅನರ್ಹಗೊಂಡಿರುವ ಶಾಸಕರಿಗೆ ಟಾಂಗ್ ನೀಡಿದ್ದಾರೆ.

ಕಾಗವಾಡ, ಅಥಣಿ, ಗೋಕಾಕ್ ಮೂರು ಕ್ಷೇತ್ರಗಳ ಉಪಚುನಾವಣೆಗೆ ನಮ್ಮ ಪಕ್ಷದ ಅಭ್ಯರ್ಥಿಗಳೇ ಕಣಕ್ಕಿಳಿಯಲಿದ್ದಾರೆ. ಅಥಣಿಯಿಂದ ಲಕ್ಷ್ಮಣ ಸವದಿ, ಕಾಗವಾಡದಿಂದ ರಾಜು ಕಾಗೆ ಹಾಗೂ ಗೋಕಾಕ್‍ನಿಂದ ಅಶೋಕ್ ಪೂಜಾರಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದರು. ರಾಜು ಕಾಗೆಯವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಅವರು ಬಿಜೆಪಿಯಲ್ಲೇ ಇರುತ್ತಾರೆ. ಉಪ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂದರು.

ನಿಮ್ಮನ್ನು ನಂಬಿ ರಾಜೀನಾಮೆ ನೀಡಿದರಲ್ಲವೇ? ಅವರಿಗೆ ಟಿಕೆಟ್ ನೀಡುವುದಿಲ್ಲವೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕತ್ತಿ, ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ ಎಂದು ಹೇಳುವ ಮೂಲಕ ಚುಚ್ಚಿದ್ದಾರೆ. ಇದರಿಂದ ಈಗಾಗಲೇ ಅತಂತ್ರರಾಗಿರುವ ಅನರ್ಹರಿಗೆ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈಗ ನಾನು ಶಾಸಕ ಅಷ್ಟೆ. ನೆರೆ ಪರಿಹಾರ ನೋಡಿಕೊಳ್ಳಲು ನನ್ನನ್ನು ಶಾಸಕನಾಗಿ ಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ನೆರೆ ಸಂತ್ರಸ್ತರಿಗೆ ಸರಿಯಾದ ಪರಿಹಾರ ನೀಡದಿದ್ದರೆ ನಾವು ಸರ್ಕಾರದ ವಿರುದ್ಧ ದನಿ ಎತ್ತಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಕೂಡ ನೀಡಿದರು. ಇದಕ್ಕೂ ಮುನ್ನ ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್‍ನ ವಿಧಾನ ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ್, ಕತ್ತಿಯವರು 8 ಬಾರಿ ಶಾಸಕರಾಗಿದ್ದಾರೆ.

ಅವರು ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿದವರು. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದೆ. ಅವರನ್ನು ಮಂತ್ರಿ ಮಾಡಿ ಅವರ ಅನುಭವವನ್ನು ಪಡೆಯಬೇಕಿತ್ತು. ಆದರೆ ಈ ಸರ್ಕಾರ ಅವರಿಗೆ ಮಂತ್ರಿ ಸ್ಥಾನ ನೀಡಿಲ್ಲ ಎಂದು ಕತ್ತಿ ಪರ ಬ್ಯಾಟಿಂಗ್ ಮಾಡಿದರು.

 

Facebook Comments