ಬಿಎಸ್‍ವೈ ವಿರುದ್ಧ ಮತ್ತೆ ‘ಕತ್ತಿ’ವರಸೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಅ.18- ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಹಾರಾಷ್ಟ್ರಕ್ಕೆ ನೀರು ಬಿಡುಗಡೆ ಮಾಡುವ ಬಗ್ಗೆ ನೀಡಿರುವ ಹೇಳಿಕೆಯನ್ನು ಬಿಜೆಪಿ ಮುಖಂಡ, ಮಾಜಿ ಸಚಿವ ಉಮೇಶ್ ಕತ್ತಿ ಖಂಡಿಸಿದ್ದಾರೆ.

ಹುಕ್ಕೇರಿಯ ಸಂಕೇಶ್ವರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯ ಮಹಾರಾಷ್ಟ್ರಕ್ಕೆ ನೀರು ಹರಿಸುವ ಮೊದಲು ಮುಖ್ಯಮಂತ್ರಿಗಳು ಕರ್ನಾಟಕದ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ. ಮೊದಲು ಕೃಷ್ಣಾ ನದಿಯ ಬಿ ಸ್ಕೀಮ್‍ನ 740 ಟಿಎಂಸಿ ನೀರು ಬಳಕೆಗೆ ಯಡಿಯೂರಪ್ಪ ಯೋಚನೆ ಮಾಡಲಿ.

ಅವರು ಮಹದಾಯಿ ಬಗ್ಗೆ ಮಾತನಾಡುತ್ತಿಲ್ಲ. ದಯವಿಟ್ಟು ಉತ್ತರ ಕರ್ನಾಟಕ ಹಾಳು ಮಾಡುವ ಯೋಚನೆ ಮಾಡಬೇಡಿ. ನಾನು ಮತ್ತೆ ಉತ್ತರ ಕರ್ನಾಟಕದ ಬಗ್ಗೆ ಧ್ವನಿ ಎತ್ತುತ್ತೇನೆ ಎಂದರು. ಬೇಸಿಗೆಯಲ್ಲಿ ಮಹಾರಾಷ್ಟ್ರ ನಮಗೆ ಹನಿ ನೀರನ್ನೂ ಕೊಟ್ಟಿಲ್ಲ. ಹೀಗಿದ್ದ ಮೇಲೆ ನಾವು ಏಕೆ ನೀರು ಕೊಡಬೇಕು ಎಂದು ಪ್ರಶ್ನಿಸಿದರು. ಈ ಹಿಂದೆ ಇದೇ ರೀತಿ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷ ಇಲ್ಲದಂತಾಗಿದೆ. ಮತ ಪಡೆಯಲು ಬಿಎಸ್‍ವೈ ಅವರು ಈ ರೀತಿಯ ಭಾಷಣ ಮಾಡಿದ್ದಾರೆ.

ಈ ರೀತಿ ಹೇಳಿಕೆ ನೀಡುವ ಬದಲು ಜನಪರ ಕೆಲಸ ಮಾಡಲಿ ಎಂದು ಕಿಡಿಕಾರಿದರು. ಚುನಾವಣೆ ಬಂದಾಗ ಒಮ್ಮೆ ನೀರು ಬಿಡುತ್ತೇವೆ ಎಂದು ಉದ್ದುದ್ದ ಭಾಷಣ ಮಾಡುತ್ತಾರೆ. ನಮಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಮೊದಲು ಅದನ್ನು ಪರಿಹರಿಸುವ ಕಡೆ ಗಮನಹರಿಸಲಿ. ನಮ್ಮ ರಾಜ್ಯಕ್ಕೆ ಅನ್ಯಾಯ ಆದರೆ ನಾನು ಯಾವುದೇ ರಾಜಕೀಯ ಹೋರಾಟಕ್ಕೂ ಸಿದ್ಧ ಎಂದರು.

Facebook Comments