“ರಾಜ್ಯದಲ್ಲಿ ಎಲ್ಲಾ ಹುದ್ದೆಗಳು ಭರ್ತಿಯಾಗಿವೆ ನನಗ್ಯಾವ ಹುದ್ದೆ ಕೊಡ್ತಾರೋ ಗೊತ್ತಿಲ್ಲ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.16- ಈಗಾಗಲೇ ರಾಜ್ಯದಲ್ಲಿರುವ ಎಲ್ಲಾ ಹುದ್ದೆಗಳು ಭರ್ತಿಯಾಗಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನಗೆ ಇನ್ಯಾವ ದೊಡ್ಡ ಹುದ್ದೆ ಕೊಡುತ್ತಾರೋ ಗೊತ್ತಿಲ್ಲ, ಯಾವುದೇ ದೊಡ್ಡ ಹುದ್ದೆಯಾದರೂ ಅದು ರಾಜ್ಯದ ಒಳಗಿದ್ದರೆ ಸಂತೋಷ ಎಂದು ಬಿಜೆಪಿ ಶಾಸಕ ಉಮೇಶ್‍ಕತ್ತಿ  ಹೇಳಿದ್ದಾರೆ.

ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ, ಮೂರು ಜನ ಉಪಮುಖ್ಯಮಂತ್ರಿ, ರಾಜ್ಯಪಾಲರು ಸೇರಿದಂತೆ ಎಲ್ಲಾ ಹುದ್ದೆಗಳು ಭರ್ತಿಯಾಗಿವೆ. ಆದರೂ ನನಗೆ ದೊಡ್ಡ ಹುದ್ದೆ ನೀಡುವುದಾಗಿ ಯಡಿಯೂರಪ್ಪ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡುತ್ತಿವೆ. ದೊಡ್ಡ ಹುದ್ದೆ ಎಂದರೆ ಯಾವುದು ಎಂದು ಗೊತ್ತಿಲ್ಲ. ಆ ಹುದ್ದೆ ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದ್ದರೆ ಸಾಕು. ಅಮೆರಿಕಾ ಸೇರಿದಂತೆ ವಿದೇಶಗಳಲ್ಲಿದ್ದರೆ ನನಗೆ ಏನು ಮಾಡಲು ಗೊತ್ತಾಗುವುದಿಲ್ಲ ಎಂದು ಹೇಳಿದರು.

ನನ್ನ ಮೇಲಿನ ಪ್ರೀತಿಯಿಂದ ಅಧಿಕಾರ ಕೊಡುವುದಾಗಿ ಯಡಿಯೂರಪ್ಪ ಹೇಳುತ್ತಿಲ್ಲ. ನನಗೆ ಸಚಿವನಾಗುವ ಯೋಗ್ಯತೆ, ಅರ್ಹತೆ ಇದೆ. ಸಚಿವ ಸ್ಥಾನ ಸಿಗದಿದ್ದ ಕಾರಣಕ್ಕಾಗಿ ನಾನು ಯಾರ ಮೇಲೂ ಮುನಿಸಿಕೊಂಡಿಲ್ಲ, ಮನಸ್ತಾಪ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅನುಭವದ ಆಧಾರದ ಮೇಲೆ ನನಗೆ ಮುಖ್ಯಮಂತ್ರಿಯಾಗುವ ಅರ್ಹತೆಯೂ ಇದೆ. ಆದರೆ ಅದಕ್ಕೆಲ್ಲ ಹಣೆಬರಹ ಬೇಕು ಎಂದು ಅವರು ಹೇಳಿದರು.

Facebook Comments