ಡೀಲರ್‌ಗಳ ಹಂತದಲ್ಲೇ ವಾಹನಗಳ ನೋಂದಣಿಗೆ ನಿರಸ ಪ್ರತಿಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.4- ಡೀಲರ್‌ಗಳ ಹಂತದಲ್ಲೇ ವಾಹನಗಳ ನೋಂದಣಿಗೆ ಅನುಮತಿ ನೀಡುವ ಸಾರಿಗೆ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗೆ ಪ್ರಾಯೋಜಿಕ ಹಂತದಲ್ಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾಹನ ಮಾಲೀಕರು ಪರದಾಡು ವಂತಾಗಿದೆ. ಕಾಗದರಹಿತ, ಸಂಪರ್ಕರಹಿತ, ಮುಖರಹಿತ ವ್ಯವಸ್ಥೆಯ ಭಾಗವಾಗಿ ವಾಹನಗಳು ಮಾರಾಟ ವಾಗುವ ಡೀಲರ್ಗಳ ಹಂತದಲ್ಲೇ ಹೊಸ ವಾಹನಗಳ ನೋಂದಣಿಗೆ ರಾಜ್ಯ ಸರ್ಕಾರ ನ.1ರಿಂದ ಅವಕಾಶ ನೀಡಿದೆ.

ಮೊದಲ ಹಂತದಲ್ಲಿ ಬೆಂಗಳೂರು ಉತ್ತರ ಭಾಗದ ಆರ್ಟಿಒ ಕಚೇರಿಯಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. ದ್ವಿಚಕ್ರ ವಾಹನ ಮತ್ತು ಫುಲ್ಲಿ ಬಿಲ್ಟ್ ನಾನ್ ಟ್ರಾನ್ಸ್ಪೆಪೋರ್ಟ್ ವಾಹನಗಳನ್ನು ಮಾತ್ರ ಡೀಲರ್ಗಳ ಹಂತದಲ್ಲಿ ನೋಂದಣಿಗೆ ಅವಕಾಶ ನೀಡಲಾಗಿದೆ. ಇಲ್ಲಿನ ಫಲಿತಾಂಶ ಆಧರಿಸಿ ಮುಂದಿನ ವರ್ಷದಿಂದ ಈ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಮಾಡುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಆದರೆ ಪ್ರಾಯೋಗಿಕ ಹಂತದಲ್ಲೇ ಯೋಜನೆ ಕುಂಟುತ್ತಾ ಸಾಗುತ್ತಿದೆ.

ಸರ್ಕಾರದ ನಿಯಮಾವಳಿಗಳ ಪ್ರಕಾರ ಪ್ರತಿ ಡೀಲರ್ ಕಚೇರಿಯಲ್ಲಿ ಇಬ್ಬರು ಅರ್ಹ ಪದವೀಧರರನ್ನು ಗುರುತಿಸಿ ಸಾರಿಗೆ ಇಲಾಖೆ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್(DSC) ನೀಡಲಿದೆ. ಈ ರೀತಿ ಪ್ರಮಾಣಪತ್ರ ಪಡೆದವರು ವಾಹನಗಳ ಮಾರಾಟದ ದಾಖಲಾತಿಗಳು, ವಾಹನ ಖರೀದಾರರ ವಿಳಾಸ ಹಾಗೂ ಇತರ ಗುರುತಿನ ದಾಖಲೆಗಳನ್ನು ವಿನೂತನವಾಗಿ ರೂಪಿಸಲಾಗಿರುವ ವೆಬ್ಸೈಟ್ಗೆ ಕ್ರಮಬದ್ಧವಾಗಿ ಪ್ಲೋಟ್ ಮಾಡಬೇಕು.

ವಾಹನಗಳ ಚಾರ್ಸಿಸ್ ನಂಬರ್ ನಮೂದಿಸುತ್ತಿದ್ದಂತೆ ಅದರ ಮೌಲ್ಯ ಮತ್ತು ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆಯ ಮೊತ್ತ ಯಾಂತ್ರಿಕವಾಗಿ ಗೋಚರವಾಗಲಿದೆ. ತೆರಿಗೆ ಪಾವತಿ ಅಂಗೀಕಾರವಾದ ಬಳಿಕ ಡಿಎಸ್ಸಿ ಪಡೆದವರು ದಾಖಲಾತಿಗಳನ್ನು ಸಲ್ಲಿಸಿ ಅನುಮತಿಗಾಗಿ ಆರ್ಟಿಒ ಕಚೇರಿಗೆ ಆನ್ಲೈನ್ನಲ್ಲೇ ಪ್ರಸ್ತಾವನೆ ಸಲ್ಲಿಸಲಿದ್ದಾರೆ.

ಆರ್ಟಿಒ ಕಚೇರಿಯ ಅಧಿಕಾರಿಗಳು ಡೀಲರ್ ಹಂತದಲ್ಲಿ ಅಪ್ಲೋಡ್ ಮಾಡಲಾದ ದಾಖಲಾತಿಗಳು, ತೆರಿಗೆ ಪಾವತಿ, ವಿಮೆ ಸೇರಿದಂತೆ ಇತರೆ ವಿಷಯಗಳನ್ನು ಪರಿಶೀಲಿಸಿ ಆಯಾ ದಿನಗಳಂದೇ ಅಂಗೀಕಾರ ನೀಡಲಿದ್ದಾರೆ. ಈ ಮೊದಲು ಎಲ್ಲ ದಾಖಲಾತಿಗಳನ್ನು ಹಿಡಿದುಕೊಂಡು ಆರ್ಟಿಒ ಕಚೇರಿಗೆ ಖುದ್ದಾಗಿ ಸಲ್ಲಿಸಿ ಅಂಗೀಕಾರ ಪಡೆದುಕೊಳ್ಳಬೇಕಾಗಿತ್ತು.

ಈ ಪ್ರಕ್ರಿಯೆ ವಿಳಂಬವಾಗಲಿದೆ ಎಂಬ ಕಾರಣಕ್ಕಾಗಿಯೇ ಡೀಲರ್ಗಳ ಹಂತದಲ್ಲೇ ನೋಂದಣಿಗೆ ಅವಕಾಶ ನೀಡಲಾಗಿದೆ. ಆದರೆ ಹಳೆಯ ವ್ಯವಸ್ಥೆಯಲ್ಲಿ ಎರಡು ದಿನಗಳಲ್ಲಿ ಪೂರ್ಣಗೊಳ್ಳುತ್ತಿದ್ದ ನೋಂದಣಿ ಪ್ರಕ್ರಿಯೆ ಹೊಸ ವ್ಯವಸ್ಥೆಯಲ್ಲಿ 15 ದಿನಗಳಾದರೂ ಕುಂಟುತ್ತಾ ಸಾಗುತ್ತಿದೆ.
ಪ್ರತಿ ಡೀಲರ್ ನೋಂದಣಿಗೆ ಅವಕಾಶ ಪಡೆದುಕೊಳ್ಳಲು ಕಾರುಗಳಿಗೆ 20 ಲಕ್ಷ, ದ್ವಿಚಕ್ರ ವಾಹನಗಳಿಗೆ 5 ಲಕ್ಷ ಭದ್ರತಾ ಠೇವಣಿ ಇಡಬೇಕಿದೆ.

ಫ್ಲೋಮೊ ಇನ್ ಆಟೋಮೊಬೈಲ್ ಅಥವಾ ಯಾವುದೇ ಪದವಿ ಪೂರ್ಣಗೊಳಿಸಿರುವ ಮತ್ತು 5 ವರ್ಷ ಅನುಭವ ಇರುವ ಇಬ್ಬರು ಅರ್ಹ ಅಭ್ಯರ್ಥಿಗಳನ್ನು ಗುರುತಿಸಬೇಕಿದೆ. ಈ ರೀತಿ ಅರ್ಹ ಅಭ್ಯರ್ಥಿಗಳನ್ನು ಗುರುತಿಸುವಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ.

ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸುತ್ತಿರುವ ಯಶವಂತಪುರ ಆರ್ಟಿಒ ಕಚೇರಿ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ವಾಹನಗಳ ಮಾರಾಟಗಾರರು ಇದ್ದಾರೆ. ಒಂದು ಕಚೇರಿಗೆ ತಲಾ ಇಬ್ಬರಂತೆ, ಕನಿಷ್ಟ 100 ಮಂದಿ ಅಭ್ಯರ್ಥಿಗಳು ಡಿಎಸ್ಸಿ ಪಡೆದುಕೊಳ್ಳ ಬೇಕಾಗಿತ್ತು. ಯೋಜನೆ ಆರಂಭವಾಗಿ ಒಂದು ತಿಂಗಳು ಕಳೆದರೂ 7 ಮಂದಿ ಮಾತ್ರ ಡಿಎಸ್ಸಿ ಪಡೆದುಕೊಂಡಿದ್ದಾರೆ.

ಪ್ರತಿ ಡೀಲರ್ ಬಳಿ ಸುಮಾರು 250, 300 ವಾಹನಗಳು ನೋಂದಣಿಗೆ ಸಾಲುಗಟ್ಟಿ ನಿಂತಿವೆ. ನೋಂದಣಿಯಾಗದೆ ವಾಹನಗಳನ್ನು ಓಡಿಸಿದರೆ ಪೊಲೀಸರು ದಂಡ ಹಾಕುತ್ತಾರೆ. ನೋಂದಣಿ ಪ್ರಕ್ರಿಯೆಗಳು ಚುರುಕಾಗದೆ ಮಿತಿಮೀರಿ ವಿಳಂಬವಾಗುತ್ತಿದೆ.

ಈ ಮೊದಲು ಪ್ರತಿ ತಿಂಗಳು ಕನಿಷ್ಠ 3 ಸಾವಿರ ವಾಹನಗಳ ನೋಂದಣಿಯಾಗುತ್ತಿತ್ತು. ಕಳೆದ ತಿಂಗಳು ಒಂದೂವರೆ ಸಾವಿರಕ್ಕಿಂತಲೂ ಕಡಿಮೆ ವಾಹನಗಳ ನೋಂದಣಿಯಾಗಿವೆ. ಸರ್ಕಾರಕ್ಕೂ ಶೇ.50ರಷ್ಟು ತೆರಿಗೆ ನಷ್ಟವಾಗಿದೆ.

ಹೊಸ ವರ್ಷಕ್ಕೆ ವಾಹನಗಳ ಖರೀದಿ ಭರಾಟೆ ಜೋರಾಗಲಿದೆ. ಈ ಒಂದು ತಿಂಗಳು ಕಳೆದರೂ ಯೋಜನೆ ಚುರುಕಾಗದೆ ಇರುವುದರಿಂದ ಗ್ರಾಹಕರಲ್ಲಿ ಆತಂಕ ಶುರುವಾಗಿದೆ.

ವಾಹನಗಳ ನೋಂದಣಿ ಜವಾಬ್ದಾರಿ ಹೊತ್ತುಕೊಳ್ಳಲು ಡೀಲರ್ಗಳು ಹಿಂದೇಟು ಹಾಕುತ್ತಿದ್ದಾರೆ. ಮುಂದೆ ಹೇಗೋ, ಏನೋ ಎಂಬ ಆತಂಕ ಅವರನ್ನು ಕಾಡುತ್ತಿದೆ. ಸಾರಿಗೆ ಇಲಾಖೆಯ ಆಯುಕ್ತರು, ಕಾರ್ಯದರ್ಶಿಗಳು ಖುದ್ದು ಸಮಾಲೋಚನೆ ನಡೆಸಿದರೂ ಕೂಡ ಡೀಲರ್ಗಳಲ್ಲಿ ವಿಶ್ವಾಸ ವೃದ್ಧಿಯಾಗುತ್ತಿಲ್ಲ ಎಂದು ಹೇಳಲಾಗಿದೆ.

ಡೀಲರ್ಗಳು ಭದ್ರತಾ ಠೇವಣಿ ಇಡಲು ಮತ್ತು ನೋಂದಣಿ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ದೇಶದಲ್ಲಿ ದೆಹಲಿಯಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಮಹಾರಾಷ್ಟ್ರದಲ್ಲಿ ಜಾರಿಗೆ ತರಲಾಗಿತ್ತಾದರೂ ಯಶಸ್ವಿಯಾಗದೆ ರದ್ದುಗೊಂಡಿದೆ.
ಕರ್ನಾಟಕದಲ್ಲಿ ರೂಪಿಸಲಾಗಿರುವ ವೆಬ್ಸೈಟ್ನಲ್ಲಿ ಯಾವುದೇ ದೋಷವಿಲ್ಲ, ಆದರೆ ಡೀಲರ್ಗಳ ನಿರಾಸಕ್ತಿಯಿಂದ ಯೋಜನೆ ಕುಂಟುತ್ತಿದೆ.
#ಉಮೇಶ್ ಕೋಲಿಗೆರೆ

 

Facebook Comments