ಕೇಂದ್ರ ಬಜೆಟ್ -2020-21 [ Live updates ]

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಫೆ.1-ಕುಸಿದುಬಿದ್ದಿರುವ ಆರ್ಥಿಕ ಚೇತರಿಕೆಗೆ ಮುನ್ನುಡಿ ಬರೆಯುವುದರ ಜತೆಗೆ ಕೃಷಿ, ಕೈಗಾರಿಕೆ, ಗ್ರಾಮಿಣಾಭಿವೃದ್ದಿ ಮತ್ತಿತರ ಆದ್ಯತಾ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಿ ಸರ್ವರ ವಿಕಾಸ ಗುರಿಯನ್ನು ಹೊಂದಿರುವ ಕೇಂದ್ರ ಬಜೆಟ್ ಇಂದು ಮಂಡನೆಯಾಗಿದೆ.ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಅವರು ಲೋಕಸಭೆಯಲ್ಲಿ ಇಂದು ಮಂಡಿಸಿದ 2020-21ನೇ ಸಾಲಿನ ಬಜೆಟ್‍ನಲ್ಲಿ ಹೆಚ್ಚು ಜನಪ್ರಿಯ ಘೋಷಣೆಗಳನ್ನು ಮಾಡದೆ ಉದ್ಯೋಗ ಸೃಷ್ಟಿಸುವತ್ತ ಹೆಚ್ಚು ಗಮನಹರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಹು ಜನಪ್ರಿಯ ಘೋಷಣೆಯಾದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಜೊತೆಗೆ ಸಬ್ ಕಾ ಲಕ್ಷ್ಯ್ ಘೋಷಣೆಯೊಂದಿಗೆ 2022ರೊಳಗೆ ರೈತರ ಆದಾಯ ದ್ವಿಗುಣಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.ದೇಶದ ಪ್ರತಿಯೊಬ್ಬ ನಾಗರಿಕನಿಗೂ ಪ್ರತಿ ಪೈಸೆಯ ಲಾಭ ಸಿಗಬೇಕೆಂಬ ಪ್ರಧಾನಿಯವರ ಕನಸಿನಂತೆ ಈ ಬಜೆಟ್‍ನ್ನು ಮೂರು ಗುರಿಗಳನ್ನಿಟ್ಟುಕೊಂಡು ಮಂಡನೆ ಮಾಡಲಾಗಿದೆ.

ನಿರೀಕ್ಷೆಯ ಭಾರತ, ಆರ್ಥಿಕಾಭಿವೃದ್ಧಿ, ಎಲ್ಲರ ಒಳಗೊಳ್ಳುವಿಕೆ ಎಂಬ ಘೋಷಣೆಯನ್ನು ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್, ಪ್ರಮುಖವಾಗಿ ದೇಶದ ಬೆನ್ನಲೆಬಾದ ಅನ್ನದಾತ ಹಾಗೂ ಮಹಿಳೆಯರಿಗೆ ವಿಶೇಷ ಒಟ್ಟು ಕೊಟ್ಟಿದ್ದಾರೆ.ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಪ್ರಸ್ತುತ 6.11 ಕೋಟಿ ರೈತರು ಇದರ ಲಾಭ ಪಡೆಯುತ್ತಿದ್ದು, 2021ರ ವೇಳೆಗೆ ಇದು ದ್ವಿಗುಣಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ಕೃಷಿ ವಲಯವನ್ನು ಅಭಿವೃದ್ಧಿಪಡಿಸಲು 16 ಅಂಶಗಳ ಯೋಜನೆಯನ್ನು ಪ್ರಕಟಿಸಿರುವ ಹಣಕಾಸು ಸಚಿವರು, ದೇಶದ 100 ಜಿಲ್ಲೆಗಳಲ್ಲಿ ಜಲಸಂವರ್ಧನೆಗೆ ವಿಶೇಷ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತೇವೆ ಎಂದು ಘೋಷಿಸಿದರು.20 ಲಕ್ಷ ರೈತರಿಗೆ ಸೋಲಾರ್ ಪಂಪ್ ವಿತರಣೆ, ಭೂಮಿಯನ್ನು ಬಿತ್ತಿ. ಆದರೆ ಅದರ ದೌರ್ಜನ್ಯ ನಡೆಸಬೇಡಿ ಎಂಬ ತಮಿಳು ಕವಿಯ ವಾಣಿಯನ್ನು ಉಲ್ಲೇಖಿಸಿದ ಸಚಿವರು, ಸಾವಯವ ಗೊಬ್ಬರ ಬಳಕೆಗೆ ರೈತರು ಹೆಚ್ಚು ಒತ್ತು ನೀಡಬೇಕೆಂದು ಕರೆಕೊಟ್ಟರು.

ರಾಸಾಯನಿಕ ಗೊಬ್ಬರ ಬಳಕೆಯ ಪ್ರಮಾಣವನ್ನು ತಗ್ಗಿಸಲು ಸರ್ಕಾರ ನೀಡುತ್ತಿರುವ ಸಬ್ಸಿಡಿ ಹಣವನ್ನು ಹಂತ ಹಂತವಾಗಿ ಹಿಂತೆಗೆದುಕೊಳ್ಳುವ ಸುಳಿವು ನೀಡಿದ್ದಾರೆ. ಸ್ವಸಹಾಯ ಗುಂಪುಗಳ ಮಾದರಿಯಲ್ಲಿ ಇನ್ನುಮುಂದೆ ದೇಶದ ಪ್ರತಿ ಗ್ರಾಮಗಳಲ್ಲೂ ಧಾನ್ಯಲಕ್ಷ್ಮಿ ಯೋಜನೆ ಪ್ರಾರಂಭವಾಗಲಿದೆ. ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್‍ಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡಿ ಸಬಲೀಕರಣಗೊಳಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

> 2020-21ನೇ ಸಾಲಿನ ಕೇಂದ್ರ ಬಜೆಟ್ ಮುಖ್ಯಾಂಶಗಳು <
# 2020-21ನೇ ಸಾಲಿನ ಬಜೆಟ್‍ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
# ಸತತ 2ನೇ ಬಾರಿ ಪೂರ್ಣ ಬಜೆಟ್ ಮಂಡಿಸಿ ನಿರ್ಮಲಾ ಸೀತಾರಾಮನ್ ಹೊಸ ದಾಖಲೆ.
# ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಎಲ್ಲರ ಆಶೋತ್ತರ ಈಡೇರಿಕೆ ಗುರಿ
# ದೇಶದ ಜನರ ಆದಾಯ ಹೆಚ್ಚಳ, ಖರೀದಿ ಶಕ್ತಿಗೆ ಬಜೆಟ್‍ನಲ್ಲಿ
# ಆರ್ಥಿಕತೆಯ ಮೂಲಭೂತ ಸದೃಢ, ಹಣದುಬ್ಬರ ನಿಯಂತ್ರಣಕ್ಕೆ ಕಡಿವಾಣ
# ಜಿಎಸ್‍ಟಿ ಐತಿಹಾಸಿಕ ರಚನಾತ್ಮಕ ಸುಧಾರಣೆ, ದೇಶದ ಆರ್ಥಿಕತೆಯಲ್ಲಿ ಸಮಗ್ರತೆ
# ಜಿಎಸ್‍ಟಿಯಿಂದ ಗ್ರಾಹಕರಿಗೆ 1 ಲಕ್ಷ ಕೋಟಿ ರೂ.ಗಳ ಆದಾಯ.
# ಏಪ್ರಿಲ್ 1ರಿಂದ ಜಿಎಸ್‍ಟಿಗಾಗಿ ಸರಳೀಕೃತ ಆದಾಯ ಪರಿಚಯ
# ದೇಶದ ಪ್ರತಿಯೊಬ್ಬರ ಸುಗಮ ಜೀವನಕ್ಕಾಗಿ ಕೇಂದ್ರ ಸರ್ಕಾರ ಕ್ರಮ
# ಭಾರತ ವಿಶ್ವದ 5ನೇ ಬೃಹತ್ ಆರ್ಥಿಕತೆಯ ದೇಶ
# ದೇಶದ 271 ದಶಲಕ್ಷ ಜನ ಬಡತನದಿಂದ ಮೇಲ್ಕರ್ಜೆಗೇರಿಕೆ
# ಡಿಜಿಟಲ್ ಆಡಳಿತದ ಮೂಲಕ ದೇಶದ ಜನರಿಗೆ ಅಡಚಣೆ ರಹಿತ ಸೇವೆ ಗುರಿ
# ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿ 6.11 ಕೋಟಿ ರೈತರಿಗೆ ವಿಮೆ ಸೌಲಭ್ಯ
# ಕೃಷಿ ಸೇವೆಗಳಿಗೆ ಹೆಚ್ಚು ಬಂಡವಾಳ ಹೂಡಿಕೆ ಮತ್ತು ಕೃಷಿ ಮಾರುಕಟ್ಟೆ ಉದಾರೀಕರಣಕ್ಕೆ ಕ್ರಮ.
# ಕೃಷಿ ಭೂಮಿ ಗುತ್ತಿಗೆ , ಮಾರುಕಟ್ಟೆ ಮತ್ತು ಕರಾರು ಒಪ್ಪಂದದ ತೋಟಗಾರಿಕೆಗಾಗಿ 3 ಕೇಂದ್ರೀಯ ಮಾದರಿ ಕಾನೂನುಗಳು ರಾಜ್ಯಗಳಿಗೂ ಅಳವಡಿಕೆ.
# ಗೊಬ್ಬರಗಳ ಸಮತೋಲನ ಬಳಕೆಗೆ ಕೃಷಿಕರಿಗೆ ಉತ್ತೇಜನ. ರಾಸಾಯನಿಕ ಗೊಬ್ಬರ ಉಪಯೋಗಕ್ಕೆ ಮಿತಿ ನಿಗದಿ.
# ಕೃಷಿಕರ ಜಮೀನು, ಹೊಲ-ಗದ್ದೆಗಳಲ್ಲಿ ಉಗ್ರಾಣ ನಿರ್ಮಾಣಕ್ಕೆ ಎಫ್‍ಸಿಐ ಮತ್ತು ಭಾರತ ಉಗ್ರಾಣ ನಿಗಮ ಸಹಾಯ.
# ದೇಶಾದ್ಯಂತ 162 ದಶಲಕ್ಷ ಟನ್‍ಗಳ ಸಾಮಥ್ರ್ಯದ ಕೃಷಿ ಉಗ್ರಾಣ ನಿರ್ಮಾಣಕ್ಕೆ ನಬಾರ್ಡ್ ನೆರವು.
# ಗ್ರಾಮ ಕೃಷಿ ಉಗ್ರಾಣ ಸೌಲಭ್ಯಗಳ ಸ್ಥಾಪನೆಗೆ ಸ್ವ ಸಹಾಯ ಗುಂಪುಗಳಿಗೆ ಪ್ರೋತ್ಸಾಹ.

# ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಥಳಗಳಿಗೆ ಕೃಷಿ ಉತ್ಪನ್ನ ಸಾಗಿಸಲು ನಾಗರಿಕ ವಿಮಾನಯಾನ ಸಚಿವಾಲಯದಿಂದ ಕೃಷಿ ಉಡಾನ್ ಯೋಜನೆ ಜಾರಿ.
# ಶೀಘ್ರ ಕೆಡುವ ಸರಕುಗಳಿಗೆ ಶೈತ್ಯಾಗಾರ. ನಿರ್ಮಾಣ ಭಾರತೀಯ ರೈಲ್ವೆಯಿಂದ ಕಿಸಾನ್ ರೈವ್ ಯೋಜನೆ.
# ಪ್ರಸಕ್ತ ಹಣಕಾಸು ವರ್ಷದಲ್ಲಿ 15 ಲಕ್ಷ ಕೋಟಿ ರೂ.ಗಳ ಕೃಷಿ ಸಾಲ.
# ನಬಾರ್ಡ್ ಮರು ಹಣಕಾಸು ಯೋಜನೆ ವಿಸ್ತರಣೆ.
# ಸಾಗರ ಮೀನುಗಾರಿಕೆ ಸಂರಕ್ಷಣೆಗೆ ಕೇಂದ್ರ ಸರ್ಕಾರ ಹೊಸ ಯೋಜನೆ.
# 2014-19ರ ಅವಧಿಯಲ್ಲಿ ದೇಶದಲ್ಲಿ ವಿದೇಶಿ ನೇರ ಬಂಡವಾಳ(ಎಫ್‍ಡಿಐ) 284 ಶತಕೋಟಿ ಡಾಲರ್‍ಗೆ ಏರಿಕೆ.
# 2022ರ ವೇಳೆಗೆ ಮೀನುಗಾರಿಕೆ ಉತ್ಪಾದನೆ 200 ಲಕ್ಷ ಟನ್ನುಗಳಿಗೆ ಏರಿಕೆ ಗುರಿ.
# ಜಾನುವಾರುಗಳ ಉತ್ಪಾದನೆ ಹೆಚ್ಚಿಸಲು ಕೃತಕ ಗರ್ಭಧಾರಣೆಯನ್ನು ಶೇ.30 ರಿಂದ ಶೇ.70ಕ್ಕೆ ವಿಸ್ತರಿಸಲು ಪ್ರಸ್ತಾವನೆ.
# ಆಯುಷ್ಮಾನ್ ಭಾರತ್ ಯೋಜನೆ ಅಡಿ ದೇಶದ ಪ್ರಮುಖ ಜಿಲ್ಲೆಗಳಲ್ಲಿ ಆಸ್ಪತ್ರೆಗಳ ನಿರ್ಮಾಣಕ್ಕೆ ಹಣಕಾಸು ನೆರವು.
# ವೈದ್ಯಕೀಯ ಉಪಕರಣಗಳು ಮತ್ತು ಸಾಧನಗಳ ಮೂಲಕ ಸಂಗ್ರಹಸಿಲಾದ ತೆರಿಗೆಗಳನ್ನು ಸರ್ಕಾರಿ ಆಸ್ಪತ್ರೆಗಳ ಮೇಲ್ದರ್ಜೆಗೆ ಬಳಕೆ.
# 2025ರ ವೇಳೆಗೆ ದೇಶಾದ್ಯಂತ ಕ್ಷಯ ರೋಗ ಸಂಪೂರ್ಣ ನಿರ್ಮೂಲನೆ ಗುರಿ.
# ದೇಶದ ಎಲ್ಲ ಜಿಲ್ಲೆಗಳಲ್ಲೂ ಜನೌಷಧಿ ಮಳಿಗೆಗಳ ವಿಸ್ತರಣೆ ಮೂಲಕ ಜನರಿಗೆ ಕಡಿಮೆ ದರದಲ್ಲಿ ಔಷಧಿಗಳ ಪೂರೈಕೆಗೆ ಕ್ರಮ
# ಸ್ವಚ್ಚ ಭಾರತ್ ಯೋಜನೆಗಾಗಿ ಪ್ರಸಕ್ತ ಸಾಲಿನಲ್ಲಿ 12,300 ಕೋಟಿ ರೂ.ಗಳು ಮೀಸಲು.
# ಮನೆಗಳಿಗೆ ಕೊಳವೆ ಮೂಲಕ ನೀರು ಪೂರೈಸಲು 3.6 ಲಕ್ಷ ಕೋಟಿ ರೂ.ಗಳ ನೀಡಿಕೆ.
# ಕೇಂದ್ರದಿಂದ ಶೀಘ್ರ ನೂತನ ಶಿಕ್ಷಣ ನೀತಿ ಘೋಷಣೆ. ಈ ಉದ್ದೇಶಕ್ಕಾಗಿ 2 ಲಕ್ಷ ಸಲಹೆಗಳ ಸ್ವೀಕೃತಿ.
# ಶೈಕ್ಷಣಿಕ ಕ್ಷೇತ್ರದಲ್ಲೂ ಬಾಹ್ಯ ವಾಣಿಜ್ಯ ಸಾಲ ಎತ್ತುವಳಿ ಮತ್ತು ಎಫ್‍ಡಿಐ ಆಕರ್ಷಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮ.
# ಯುವ ಎಂಜಿನಿಯರ್‍ಗಳು ಇಂಟರ್ಸ್‍ಶಿಪ್ ತರಬೇತಿ ಪಡೆಯಲು ನಗರ ಸ್ಥಳೀಯ ಸಂಸ್ಥೆಗಳಿಂದ ಕಾರ್ಯಕ್ರಮ ಆರಂಭಿಸಲು ಪ್ರೋತ್ಸಾಹ.
# ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ಉದ್ದೇಶ.
# ವೈದ್ಯರು ಕೊರತೆ ನೀಗಿಸಲು ಸರ್ಕಾರದ ಸಹಭಾಗಿತ್ವದಲ್ಲಿ ಜಿಲ್ಲಾ ಆಸ್ಪತ್ರೆಗಳನ್ನು ವೈದ್ಯಕೀಯ ಕಾಲೇಜುಗಳೊಂಧಿಗೆ ವಿಲೀನ ಮಾಡಲು ಕ್ರಮ.
# ಶಿಕ್ಷಕರು, ನರ್ಸ್‍ಗಳು, ಅರೆ ವೈದ್ಯಕೀಯ ಸಿಬ್ಬಂದಿ, ಆರೋಗ್ಯ ರಕ್ಷಕರಿಗೆ ವಿಶೇಷ ಸಂಪರ್ಕ ಕೋರ್ಸ್‍ಗಳ ಪ್ರಸ್ತಾವನೆ.
# ಶಿಕ್ಷಣ ಕ್ಷೇತ್ರಕ್ಕೆ 99,300 ಕೋಟಿ ರೂ. ಹಾಗೂ ಕೌಶಲ್ಯಾಭಿವೃದ್ದಿ ಯೋಜನೆಗಾಗಿ 3,000 ಕೋಟಿ ರೂ. ಮಂಜೂರು.

ನವದೆಹಲಿ, ಫೆ.1- ಆದಾಯ ತೆರಿಗೆಯ ಸ್ಲ್ಯಾಬ್‍ಗಳಲ್ಲಿ ಬದಲಾವಣೆ ಮಾಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾಸೀತಾರಾಮನ್ ಅವರು, ಮಧ್ಯಮವರ್ಗದಿಂದ ಮೇಲ್ಪಟ್ಟ ವರ ಆದಾಯ ತೆರಿಗೆಗೆ ಸ್ವಲ್ಪ ರಿಯಾಯ್ತಿ ನೀಡಿದ್ದಾರೆ.
ಈ ಮೊದಲು ಎರಡೂವರೆ ಲಕ್ಷದವರೆಗೂ ಸಂಪೂರ್ಣ ಆದಾಯ ತೆರಿಗೆ ವಿನಾಯ್ತಿ ಇತ್ತು. ಅದನ್ನು ನಿರ್ಮಾಲಾಸೀತಾರಾಮನ್ ಅವರು 5 ಲಕ್ಷದವರೆಗೂ ಹೆಚ್ಚಿಸಿ ಮಧ್ಯಮ ವರ್ಗದವಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಹಿಂದಿನ ತೆರಿಗೆ ಪದ್ಧತಿ:
2.5ರಿಂದ 5 ಲಕ್ಷದವರೆಗೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. 5ರಿಂದ 10 ಲಕ್ಷದವರೆಗೆ ಶೇ.20ರಷ್ಟು, 10ಲಕ್ಷದಿಂದ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಈ ತೆರಿಗೆಯ ಹಂತಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಸರಳೀಕರಣ ಮಾಡಲಾಗಿದೆ.
ಪರಿಸ್ಕøತ ತೆರಿಗೆ ಪದ್ಧತಿ:
5ರಿಂದ 10 ಲಕ್ಷದವರೆಗಿನ ಆದಾಯಕ್ಕೆ ಇದ್ದ ಶೇ.20ರಷ್ಟು ತೆರಿಗೆ ಮಿತಿಯನ್ನು ವಿಂಗಡಿಸಿ 5ರಿಂದ 7.5ಲಕ್ಷಕ್ಕೆ ಮಾರ್ಪಡಿಸಲಾಗಿದೆ. ತೆರಿಗೆಯ ದರವನ್ನು ಶೇ.10ಕ್ಕೆ ನಿಗದಿಪಡಿಸಲಾಗಿದೆ.
7.5ರಿಂದ 10 ಲಕ್ಷದವರೆಗೆ ಮತ್ತೊಂದು ಹಂತವನ್ನು ನಿಗದಿಪಡಿಸಲಾಗಿದ್ದು, ಅದಕ್ಕೆ ಶೇ.15ರಷ್ಟು ತೆರಿಗೆ ವಿದಿಸಲಾಗಿದೆ. ಇದರಿಂದಾಗಿ 5ರಿಂದ 10 ಲಕ್ಷದೊಳಗಿನ ಆದಾಯ ಹೊಂದಿರುವವರಿಗೆ ಒಂದೇ ಹಂತದ ಬದಲಾಗಿ ಎರಡು ಹಂತದಲ್ಲಿ ತೆರಿಗೆ ವಿಧಿಸಲಾಗುತ್ತಿದೆ.
10ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಸರಾಸರಿ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು.
ಅದನ್ನು ಮತ್ತೆ ವಿಂಗಡಿಸಲಾಗಿದ್ದ್ದು, 10ರಿಂದ 12.5 ಲಕ್ಷ ಆದಾಯಕ್ಕೆ ಶೇ.20, 12.5ರಿಂದ 15ಲಕ್ಷದವರೆಗಿನ ಆದಾಯಕ್ಕೆ ಶೇ.25ರಷ್ಟು ತೆರಿಗೆ ವಿಧಿಸಲಾಗಿದೆ. 15 ಲಕ್ಷ ಮೇಲ್ಪಟ್ಟ ಆದಾಯದಾರರಿಗೆ ಶೇ.30ರಷ್ಟು ತೆರಿಗೆ ಪದ್ಧತಿ ಯಥಾರೀತಿ ಮುಂದುವರೆದಿದೆ.

# 2019-20ರ ತೆರಿಗೆ ತೆರಿಗೆ ದರ
2.5ಲಕ್ಷದವರೆಗೆ ಇಲ್ಲ
2.5ರಿಂದ 5ಲಕ್ಷದವರೆಗೆ ಶೇ.5
5ರಿಂದ 10 ಲಕ್ಷದವರೆಗೆ ಶೇ.20
10ಲಕ್ಷ ಮೇಲ್ಪಟ್ಟು ಶೇ.30

# 2020-21ರ ತೆರಿಗೆ ತೆರಿಗೆ ದರ
5ಲಕ್ಷದವರೆಗೆ ಇಲ್ಲ
5ರಿಂದ 7.5 ಲಕ್ಷದವರೆಗೆ ಶೇ.10
7.5ರಿಂದ 10 ಲಕ್ಷದವರೆಗೆ ಶೇ.15
10ರಿಂದ 12.5ಲಕ್ಷದವರೆಗೆ ಶೇ.20
12.5ರಿಂದ 15ಲಕ್ಷ ದವರೆಗೆ ಶೇ.25

# ಉಡಾನ್ ಯೋಜನೆಯಡಿ 100 ವಿಮಾನ ನಿಲ್ದಾಣಗಳ ಆರಂಭ


ನವದೆಹಲಿ,ಫೆ.1- ಜನಸಾಮಾನ್ಯರು ವಿಮಾನದಲ್ಲಿ ಪ್ರಯಾಣಿಸುವ ವಿನೂತನ ಯೋಜನೆಯಾದ ಉಡಾನ್ ಯೋಜನೆಯಡಿ ಹೊಸದಾಗಿ ಇನ್ನು 100 ವಿಮಾನ ನಿಲ್ದಾಣಗಳನ್ನು 2024ರೊಳಗೆ ಆರಂಭಿಸುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಉಡಾನ್ ಯೋಜನೆಯಡಿ ದೇಶಾದ್ಯಂತ 100 ವಿಮಾನ ನಿಲ್ದಾಣಗಳನ್ನು ಪ್ರಾರಂಭ ಮಾಡುತ್ತೇವೆ. ಸಾರ್ವಜನಿಕರಿಂದ ಉತ್ತಮವಾದ ಪ್ರತಿಕ್ರಿಯೆ ಬಂದಿರುವುದರಿಂದ ಕೇಂದ್ರದಿಂದ ಈ ಯೋಜನೆ ಪ್ರಾರಂಭಿಸುವುದಾಗಿ ಹಣಕಾಸು ಖಾತೆ ಸಚಿವೆ ನಿರ್ಮಾಲಾ ಸೀತರಾಮನ್ ಪ್ರಕಟಿಸಿದರು.

ದೆಹಲಿ ಮತ್ತು ಮುಂಬೈ ಹಾಗೂ ಚೆನ್ನೈ-ಬೆಂಗಳೂರು ನಡುವೆ 2023ರೊಳಗೆ ಎಕ್ಸ್‍ಪ್ರೆಸ್ ವೇ ನಿರ್ಮಾಣವಾಗಲಿದ್ದು, ಇದಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ಹೇಳಿದರು. ಈ ಬಾರಿಯ ಬಜೆಟ್‍ನಲ್ಲಿ ಸಾರಿಗೆ ಮೂಲಭೂತ ಸೌಕರ್ಯಗಳಿಗೆ 1.7 ಲಕ್ಷ ಕೋಟಿ ಅನುದಾನವನ್ನು ನೀಡಲಿದ್ದು, ನವೀಕರಣಗೊಳಿಸಬಹುದಾದ ಇಂಧನ ವಲಯಕ್ಕೆ 22,500 ಕೋಟಿ ಅನುದಾನ ಒದಗಿಸಲಾಗಿದೆ.

# ಜಮ್ಮುಕಾಶ್ಮೀರಕ್ಕೆ ಬಂಪರ್ ಗಿಫ್ಟ್..!


ಸಂವಿಧಾನದ ವಿಶೇಷ ಸ್ಥಾನಮಾನ 370ನೇ ವಿಧಿಯನ್ನು ರದ್ದುಪಡಿಸಿದ್ದ ಕಣಿವೆ ರಾಜ್ಯ ಜಮ್ಮುಕಾಶ್ಮೀರಕ್ಕೆ ಈ ಬಾರಿಯ ಬಜೆಟ್‍ನಲ್ಲಿ ಬಂಪರ್ ಕೊಡುಗೆ ನೀಡಲಾಗಿದೆ. ಜಮ್ಮುಕಾಶ್ಮೀರದ ಅಭಿವೃದ್ಧಿಗಾಗಿ ಬಜೆಟ್‍ನಲ್ಲಿ 30,757 ಕೋಟಿ ಹಾಗೂ ನೂತನ ಕೇಂದ್ರಾಡಳಿತ ಪ್ರದೇಶವಾದ ಲಡಾಕ್‍ಗೆ 5,958 ಕೋಟಿ ವಿಶೇಷ ಪ್ಯಾಕೆಜ್ ಘೋಷಣೆ ಮಾಡಲಾಗಿದೆ.

ಲೋಕಸಭೆಯಲ್ಲಿ ಇಂದು 2020-21ನೇ ಸಾಲಿನ ಆಯವ್ಯಯ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಜಮ್ಮುಕಾಶ್ಮೀರ ಮತ್ತು ಲಡಾಕ್ ಪ್ರಾಂತ್ಯಗಳನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವುದೇ ಸರ್ಕಾರದ ಮೂಲ ಉದ್ದೇಶವಾಗಿದೆ ಎಂದರು.ಮೂಲಗಳ ಪ್ರಕಾರ ವರ್ಷದ ಅಂತ್ಯಕ್ಕೆ ಜಮ್ಮುಕಾಶ್ಮೀರದಲ್ಲಿ ಚುನಾವಣೆ ನಡೆಯಲಿದ್ದು, ಕಣಿವೆ ರಾಜ್ಯದ ಜನರನ್ನು ಓಲೈಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮೂಗಿಗೆ ತುಪ್ಪ ಸವರಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಮ್ಮುಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಐತಿಹಾಸಿಕ ಕ್ರಮವನ್ನು ತೆಗೆದುಕೊಂಡಿದ್ದರು. 370ನೇ ವಿಧಿ ರದ್ದತಿ ಬಳಿಕ ಈಗಲೂ ಆ ರಾಜ್ಯದಲ್ಲಿ ಅಂತರ್ಜಾಲ ಸೇವೆಗಳಿಗೆ ನಿರ್ಬಂಧ ಹೇರಲಾಗಿದೆ. ಕಳೆದ ವಾರವಷ್ಟೇ ಕೆಲವೆಡೆ ಇಂಟರ್‍ನೆಟ್ ಮತ್ತು ದೂರವಾಣಿ ಸಂಪರ್ಕಕ್ಕೆ ಅವಕಾಶ ನೀಡಲಾಗಿತ್ತು.

# ಅಂಗನವಾಡಿ ಕಾರ್ಯಕರ್ತೆಯರ ಕೈಗೆ ಸ್ಮಾರ್ಟ್ ಫೋನ್  : 


ನವದೆಹಲಿ,ಫೆ.1- ಅಂಗನವಾಡಿ ಕಾರ್ಯಕರ್ತೆಯರ ಕೈಗೆ ಈಗ ಸ್ಮಾರ್ಟ್ ಫೋನ್ ಸಿಗಲಿದೆ.  ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಇಂದು ಮಂಡಿಸಿದ ಆಯವ್ಯಯದಲ್ಲಿ ಈ ಪ್ರಸ್ತಾಪ ಮಾಡಿದ್ದು, ದೇಶದ 6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‍ ಫೋನ್ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.ಬಡಮಕ್ಕಳ ಸರ್ವತ್ತೋಮುಖ ಬೆಳವಣಿಗೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದ್ದು, ಮೊಬೈಲ್ ಅಗತ್ಯವಿರುವ ನಿಟ್ಟಿನಲ್ಲಿ ಸರ್ಕಾರ ಅವರಿಗೆ ಮೊಬೈಲ್ ನೀಡಲು ನಿರ್ಧರಿಸಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ವೇತನ ಹೆಚ್ಚಳ, ಸೇವಾ ಭದ್ರತೆಗಾಗಿ ಆಗ್ರಹಿಸಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ಈಗ ಕೇಂದ್ರ ಸರ್ಕಾರ ಅವರಿಗೆ ಮೊಬೈಲ್ ಕೊಡಲು ಮುಂದಾಗಿದೆ.ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಒದಗಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಬೇಕಾಗುತ್ತದೆ. ಹೀಗಾಗಿ ಅವರಿಗೆ ನೀಡುತ್ತಿರುವುದಾಗಿ ನಿರ್ಮಲಾ ತಿಳಿಸಿದ್ದಾರೆ.

# ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಜನೌಷಧಿ ಕೇಂದ್ರ
ನವದೆಹಲಿ,ಫೆ.1- ದೇಶದ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಒತ್ತು ನೀಡಿರುವ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆಗೆ ಮುಂದಾಗಿದೆ. ಇಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಈ ವಿಷಯ ಪ್ರಸ್ತಾಪಿಸಿದ್ದು, ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. 69 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ ಮಾಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ಜೊತೆ 20 ಸಾವಿರ ಆಸ್ಪತ್ರೆಗಳು ಕೈಜೋಡಿಸಿವೆ ಎಂದು ಅವರು ಹೇಳಿದರು.

ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಜನೌಷಧಿ ಕೇಂದ್ರ ವಿಸ್ತರಣೆ ಮಾಡಲಾಗುವುದು. ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆಗಳ ಸ್ಥಾಪನೆ ಮಾಡಲಾಗುವುದು. ಕೇಂದ್ರ ಸರ್ಕಾರ ನಡೆಸುತ್ತಿರುವ ಮಳೆಬಿಲ್ಲು ಮಿಷನ್ ವಿಸ್ತರಿಸಲಾಗುವುದು. ವೈದ್ಯಕೀಯ ಸಾಧನದಲ್ಲಿ ಯಾವುದೇ ತೆರಿಗೆಯನ್ನು ಸ್ವೀಕರಿಸಿದರೂ, ಅದನ್ನು ವೈದ್ಯಕೀಯ ಸೌಲಭ್ಯಗಳನ್ನು ಉತ್ತೇಜಿಸಲು ಬಳಸಲಾಗುವುದು ಎಂದರು.

ಟಿಬಿ ಕಾಯಿಲೆ ವಿರುದ್ಧ ದೇಶದಲ್ಲಿ ಅಭಿಯಾನ ಪ್ರಾರಂಭಿಸಲಾಗುವುದು. ಟಿಬಿ ಹೋಗಲಿದೆ, ದೇಶ ಗೆಲ್ಲಲಿದೆ ಅಭಿಯಾನ ಶುರುವಾಗಲಿದೆ. 2025 ರ ವೇಳೆಗೆ ದೇಶವನ್ನು ಟಿಬಿ ಮುಕ್ತವಾಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಪ್ರಧಾನ್ ಮಂತ್ರಿ ಜನ ಆಶಾದಿ ಯೋಜನೆಯಡಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.

# ಸ್ವಚ್ಛ ಭಾರತ ಯೋಜನೆಗೆ 12,300 ಕೋಟಿ, ರಾಷ್ಟ್ರೀಯ ಪೊಲೀಸ್ ವಿವಿ ಸ್ಥಾಪನೆ
ನವದಹೆಲಿ,ಫೆ.1- ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಯೋಜನೆಗೆ 12,300 ಕೋಟಿ ರೂಗಳ ಅನುದಾನವನ್ನು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಮೀಸಲಿಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಹೇಳಿದರು.ತಮ್ಮ ಎರಡನೇ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ ಅವರು, ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ನೀಡುವ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಪ್ರತಿಷ್ಟಿತ ಸಂಸ್ಥೆಗಳ ಮೂಲಕ ಆನ್‍ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ರಾಷ್ಟ್ರೀಯ ಪೊಲೀಸ್ ವಿವಿ ಘೋಷಣೆ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜು ಪ್ರಾರಂಭ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಲು ಯುವ ಎಂಜಿನಿಯರ್‍ಗಳಿಗೆ ಇಂಟರ್ನ್‍ಶಿಪ್ ಸೌಲಭ್ಯ ನೀಡಲಾಗುವುದು. ಉನ್ನತ ಶಿಕ್ಷಣವನ್ನು ಸುಧಾರಿಸಲು ಸರ್ಕಾರ ಕೆಲಸ ಮಾಡುತ್ತಿದೆ. ವಿಶ್ವದ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಅಧ್ಯಯನ ಮಾಡಲು ಸೌಲಭ್ಯಗಳನ್ನು ನೀಡಲಾಗುವುದು.ಭಾರತದಿಂದ ವಿದ್ಯಾರ್ಥಿಗಳನ್ನು ಏಷ್ಯಾ, ಆಫ್ರಿಕಾದ ದೇಶಗಳಿಗೆ ಅಧ್ಯಯನಕ್ಕೆ ಕಳುಹಿಸಲಾಗುವುದು. ವೈದ್ಯರಿಗಾಗಿ ಬ್ರಿಜ್ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಇದು ಪ್ರಾಕ್ಟೀಸ್ ಮಾಡುವ ವೈದ್ಯರಿಗೆ ಸಹಾಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

# ಕೇಂದ್ರ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಬರಪೂರ ಕೊಡುಗೆ..!
ನವದೆಹಲಿ, ಫೆ.1- ಕೃಷಿ ಕ್ಷೇತ್ರಕ್ಕೆ ಬರಪೂರ ಕೊಡುಗೆಗಳನ್ನು ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು 16 ಅಂಶಗಳ ಯೋಜನೆಗಳನ್ನು ಪಟ್ಟಿ ಮಾಡಿದ್ದಾರೆ. ಅಂತರ್ಜಲ ಕುಸಿತಕಂಡಿರುವ 100 ಜಿಲ್ಲೆಗಳಲ್ಲಿ ಸಮಗ್ರವಾಗಿ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಕೃಷಿಗೆ 15 ಲಕ್ಷ ಕೋಟಿ ಸಾಲ ನೀಡುವ ಗುರಿ ನಿಗದಿಪಡಿಸಲಾಗಿದೆ. ಹಳ್ಳಿಗಳಲ್ಲೇ ದಾಸ್ತಾನು ಮಳಿಗೆಗಳನ್ನು ಸ್ಥಾಪಿಸುವ ಸಲುವಾಗಿ ಧಾನ್ಯಲಕ್ಷ್ಮಿ ಯೋಜನೆಯನ್ನು ಪ್ರಕಟಿಸಲಾಗಿದೆ.

ರೈತರು ಮತ್ತು ರೈತ ಮಹಿಳೆಯರಿಗೆ ಧಾನ್ಯಲಕ್ಷ್ಮಿ ಯೋಜನೆಯಿಂದ ತಮ್ಮ ಆಹಾರ ಸಂಗ್ರಹಕ್ಕೆ ಅನುಕೂಲವಾಗಲಿದೆ. ಕೈಗೆಟಕುವ ದರದಲ್ಲಿ ಬಾಡಿಗೆ ನಿಗದಿ ಮಾಡುವುದು, ದಾಸ್ತಾನು ಮಳಿಗೆ ನಿರ್ಮಾಣಕ್ಕೆ ಹಣಕಾಸು ಸೌಲಭ್ಯ ಒದಗಿಸುವ ಹೇಳಿಕೆಯನ್ನು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಒಣ ಭೂಮಿಗಳಲ್ಲಿ ಕೃಷಿಕರು ಸೌರಶಕ್ತಿ ಉತ್ಪಾದನಾ ಘಟನಗಳನ್ನು ಸ್ಥಾಪಿಸಲು ಸಹಾಯ ಮಾಡಲಾಗುತ್ತದೆ. ರೈತರು ತಮಗೆ ಅಗತ್ಯದಷ್ಟು ಸೌರಶಕ್ತಿ ವಿದ್ಯುತ್ತನ್ನು ಬಳಸಿಕೊಂಡು ಹೆಚ್ಚವರಿಯನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ರಾಸಾಯನಿಕ ಗೊಬ್ಬರ ಬಳಕೆಯಲ್ಲಿ ಸಮತೋಲನ ಸಾಧಿಸಲಾಗುವುದು ಎಂದು ಹೇಳಿದ್ದಾರೆ.

# ಏಪ್ರಿಲ್‍ನಿಂದ ಜಿಎಸ್‍ಟಿ ಮತ್ತಷ್ಟು ಸರಳ : 
ನವದೆಹಲಿ,ಫೆ.1-ಜಿಎಸ್‍ಟಿಯಿಂದ ಪ್ರತಿ ಕುಟುಂಬಕ್ಕೂ ಶೇ.4ರಷ್ಟು ತೆರಿಗೆ ಹೊರೆ ಕಡಿಮೆಯಾದಂತಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ. ಸಂಸತ್‍ನಲ್ಲಿಂದು ಬಜೆಟ್ ಮಂಡನೆ ಮಾಡಿ ಮಾತನಾಡಿದ ಅವರು, ಜಿಎಸ್‍ಟಿಯ ಶಿಲ್ಪಿ ಅರುಣ್ ಜೇಟ್ಲಿ. ಅವರು ಇಂದು ನಮ್ಮೊಂದಿಗಿಲ್ಲ. ಅವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸುತ್ತೇನೆ. ಜಿಎಸ್‍ಟಿ ಪದ್ದತಿ ಐತಿಹಾಸಿಕವಾದ ರಚನಾತ್ಮಕ ಸುಧಾರಣೆಗೆ ಕಾರಣವಾಗಿದೆ.

ದೇಶದ ತೆರಿಗೆ ವ್ಯವಸ್ಥೆಯನ್ನು ಸಮಗ್ರವಾಗಿ ಸುಧಾರಿಸಲು ಜಿಎಸ್‍ಟಿ ನೆರವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು. ಜಿಎಸ್‍ಟಿ ಜಾರಿಯ ವೇಳೆ ಕೆಲವು ಸಮಸ್ಯೆಗಳು ಎದುರಾಗಿದ್ದವು. ಆದರೆ ಜಿಎಸ್‍ಟಿ ಕೌನ್ಸಿಲ್ ಕಾಲದಿಂದ ಕಾಲಕ್ಕೆ ಬಗೆಹರಿಸಿಕೊಟ್ಟಿದೆ. ಇದರಿಂದ ವ್ಯವಹಾರ ಸುಲಭವಾಗಿದೆ.ಜಿಎಸ್‍ಟಿಯಿಂದಾಗಿ ಕಳೆದ ಎರಡು ವರ್ಷಗಳಿಂದ 60 ಲಕ್ಷ ಹೊಸ ತೆರಿಗೆದಾರರು ತೆರಿಗೆ ಪಾವತಿ ವ್ಯಾಪ್ತಿಗೆ ಸೇರಿದ್ದಾರೆ. 40 ಕೋಟಿ ರಿಟನ್ರ್ಸ್‍ಗಳು ದಾಖಲಾಗುತ್ತಿವೆ. ಸುಮಾರು 800 ಕೋಟಿ ಇನ್‍ವಾಯ್ಸ್‍ಗಳು ಅಪ್‍ಲೋಡ್ ಆಗಿದ್ದು, 105 ಕೋಟಿ ಇವೆ ಬಿಲ್‍ಗಳು ಜನರೇಟ್ ಆಗಿವೆ ಎಂದು ಹೇಳಿದರು.

2020ರ ಏಪ್ರಿಲ್ 1ರಿಂದ ಜಿಎಸ್‍ಟಿ ಸಲ್ಲಿಕೆಯಲ್ಲಿ ಮತ್ತಷ್ಟು ಸರಳ ವಿಧಾನವನ್ನು ದೇಶಕ್ಕೆ ಪರಿಚಯಿಸುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದರು. ಸಾರಿಗೆ ಮತ್ತು ಸರಕು ಸಾಗಾಣಿಕೆ ಕ್ಷೇತ್ರಕ್ಕೆ ಜಿಎಸ್‍ಟಿಯಿಂದ ಭಾರೀ ಲಾಭವಾಗಿದೆ. ಇನ್‍ಸ್ಪೆಕ್ಟರ್‍ರಾಜ್ ವ್ಯವಸ್ಥೆಯನ್ನು ತೆಗೆದು ಹಾಕಲಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯ ವರ್ಷಕ್ಕೆ ಸುಮಾರು ಒಂದು ಲಕ್ಷ ಕೋಟಿ ರೂ. ಲಾಭ ಪಡೆಯುತ್ತಿದೆ ಎಂದು ಹೇಳಿದರು.

ತಾವು ಮಂಡಿಸುತ್ತಿರುವ ಬಜೆಟ್ ದೇಶದ ಆರ್ಥಿಕ ಶಕ್ತಿಯನ್ನು ಎತ್ತರಕ್ಕೆ ಕೊಂಡೊಯ್ಯಲಿದೆ. ಆರ್ಥಿಕತೆಯ ಮೂಲಭೂತ ವ್ಯವಸ್ಥೆ ಬಲಗೊಳ್ಳಲಿದೆ. ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ. ಜನರ ಖರೀದಿ ಶಕ್ತಿ ಹೆಚ್ಚುತ್ತಿದ್ದು, ಆದಾಯ ಗಳಿಕೆ ಗಣನೀಯ ಏರಿಕೆ ಕಾಣುತ್ತಿದೆ ಎಂದು ತಿಳಿಸಿದರು. ನಮ್ಮ ದೇಶದ ಜನ ಲಾಭದಾಯಕ ಉದ್ಯೋಗಗಳನ್ನು ಪಡೆಯಲಿದ್ದಾರೆ. ಉದ್ಯಮಗಳು ಆರೋಗ್ಯ ಹೆಚ್ಚಾಗಲಿದೆ. ದೇಶದ ಎಲ್ಲ ಅಲ್ಪಸಂಖ್ಯಾತರು, ಮಹಿಳೆಯರು, ಪರಿಶಿಷ್ಟ ವರ್ಗ/ಪಂಗಡದವರ ನಿರೀಕ್ಷೆಗಳು ಮತ್ತು ಗುರಿಗಳನ್ನು ಬಜೆಟ್ ಪೂರ್ಣಗೊಳಿಸಲಿದೆ ಎಂದು ಹೇಳಿದರು.

Facebook Comments

Sri Raghav

Admin